ಭಾಲ್ಕಿ: ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ಭಾಗಿಯಾಗಿದ್ದರು. ಗಣಾಚಾರ ನಿಷ್ಠೆಯ ಮಡಿವಾಳ ಮಾಚಿದೇವರು ಸ್ವಾಭಿಮಾನದ ಬದುಕು ಸಾಗಿಸಿದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸ್ಮರಿಸಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದಿಮದ ಶುಕ್ರವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಸ್ಮರಣೋತ್ಸವ, ೨೯೨ನೇ ಮಾಸಿಕ ಶರಣ ಸಂಗಮ ಮತ್ತು ಡಾ.ಪಲ್ಲವಿ ಪಾಟೀಲ್ ವಿರಚಿತ ವಚನ ಪಲ್ಲವಿ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾಚಿದೇವರು ಬಟ್ಟೆ ಒಗೆಯುವ ಜತೆಗೆ ಎಲ್ಲರ ಮನಸ್ಸಿನ ಮೈಲಿಗೆ ತೊಳೆಯುವ ಕಾಯಕವು ಮಾಡುತ್ತಿದ್ದರು. ಅವರ ವಚನಗಳು ನಮ್ಮ ಮನಸ್ಸಿನಲ್ಲಿರುವ ಮಾಲಿನ್ಯ ಕಳೆಯುತ್ತವೆ. ಕಲ್ಯಾಣ ಹತ್ಯಾಕಾಂಡದ ವೇಳೆ ಅಕ್ಕನಾಗಮ್ಮ, ಚನ್ನಬಸವಣ್ಣನವರ ಜತೆಗೆ ಗಣಾಚಾರಿ ದಳದ ನೇತೃತ್ವ ವಹಿಸಿ ವಚನ ಸಾಹಿತ್ಯ ರಕ್ಷಣೆಗೆ ಮಾಚಿದೇವರು ನೀಡಿರುವ ಕೊಡುಗೆ ಅಪಾರ ಎಂದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಶಂಕರಲಿಂಗ ಸ್ವಾಮೀಜಿ ನೇತೃತ್ವ ವಹಿಸಿದರು. ಮುಖಂಡ ಸಾಗರ ಖಂಡ್ರೆ ವಚನ ಪಲ್ಲವಿ ಗ್ರಂಥ ಬಿಡುಗಡೆಗೊಳಿಸಿದರು.
ಸತೀಶ ಮಡಿವಾಳ ಉಪನ್ಯಾಸ ನೀಡಿದರು. ರಮೇಶ ಮಾನಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮಲ್ಲಮ್ಮ ನಾಗನಕೆರೆ, ದಿಲೀಪ ಮಡಿವಾಳ, ಭೀಮರಾವ ವಡ್ಡೆ, ಸಂತೋಷ ಮಡಿವಾಳ, ಜೈರಾಜ ಧೂಮ್ಮನಸೂರೆ ಇತರರಿದ್ದರು. ವೀರಣ್ಣ ಕುಂಬಾರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ಯಲ್ಲನಗೌಡ ಬಾಗಲಕೋಟ ವಚನ ಸಂಗೀತ ನಡೆಸಿಕೊಟ್ಟರು.