ಬೆಳಗಾವಿ: ವಿದ್ಯಾರ್ಥಿನಿಯರು ಪಾಲಕರ ನಿರೀಕ್ಷೆ ಹುಸಿಗೊಳಿಸದೆ ಅವಕಾಶ ಸದುಪಯೋಗಪಡಿಸಿಕೊಂಡು ಸ್ವಂತ ಕಾಲ ಮೇಲೆ ನಿಲ್ಲಬೇಕು. ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದ ಉಷಾತಾಯಿ ಗೋಗಟೆ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಶುಕ್ರವಾರ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ ಬಹಳಷ್ಟು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದಕ್ಕೆ ತಕ್ಕಂತೆ ಓದಬೇಕು. ಅವಕಾಶಗಳು ಸಾಕಷ್ಟಿವೆ, ಶಿಕ್ಷಣಕ್ಕೆ ಬೇಕಾದಷ್ಟು ಪ್ರೋತ್ಸಾಹವೂ ಇದೆ. ಪ್ರತಿ ಮಗುವೂ ಓದಬೇಕು, ಸ್ವಂತ ಕಾಲಮೇಲೆ ನಿಲ್ಲುವಂತಾಗಬೇಕೆನ್ನುವುದೇ ಸರ್ಕಾರದ ಉದ್ದೇಶ ಎಂದರು.
ಚಂದ್ರಯಾನದಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡಿದ್ದಾರೆ. ನಾಲ್ಕು ಜನರಿಗೆ ಉಪಕಾರ ಮಾಡಬೇಕು. ಯಾವುದೇ ಕ್ಷೇತ್ರ ಆಯ್ದುಕೊಂಡರೂ ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕು. ತುಳಿಯುವವರು ಸಾಕಷ್ಟಿರುತ್ತಾರೆ. ಆದರೆ, ಅದ್ಯಾವುದಕ್ಕೂ ಜಗ್ಗದೆ ಮನಸ್ಸಿದ್ದಲ್ಲಿ ಮಾರ್ಗ ಎನ್ನುವುದನ್ನು ನೆನಪಿಟ್ಟುಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು. ಬೆಳಗಾಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಉಪಾಧ್ಯಕ್ಷ ಸುಧೀರ ಕುಲಕರ್ಣಿ, ಶಾಲಾ ಆಡಳಿತ ಮಂಡಳಿ ಚೇರ್ಮನ್ ಚಿಂತಾಮಣರಾವ್ ಬ್ರಹ್ಮೋಪಾಧ್ಯಾಯ, ಮುಖ್ಯಾಧ್ಯಾಪಕ ಎಂ.ಕೆ.ಮಾದರ್, ಡಾ.ಸ್ವಾತಿ ಮಾವಿನಕಟ್ಟಿಮಠ, ಕಿರಣ ಮಾಲಿಪಾಟೀಲ, ಸರಸ್ವತಿ ದೇಸಾಯಿ, ಸುಲೋಚನಾ ಐವಾಳೆ ಇತರರಿದ್ದರು.