ಜಿಲ್ಲೆ

ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಿ

ಕಿಕ್ಕೇರಿ: ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ನಾಡಿಗಾಗಿ ಹುತ್ಮಾತ್ಮರಾದವರಿಗೆ ಗೌರವ ಸಲ್ಲಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ತಿಳಿಸಿದರು.


ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಟಾಚಾರದ ಆಚರಣೆ ಬೇಡ. ಸ್ವಾತಂತ್ರ್ಯ ದಿನಾಚರಣೆ ಉದ್ದೇಶ ತಿಳಿಯಬೇಕಿದೆ. ಮನೋರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಹುತಾತ್ಮರಾದ ಮಹನೀಯರ ಸ್ಮರಣೆ, ತತ್ವ ಸಿದ್ಧಾಂತಗಳನ್ನು ಕಿಂಚಿತ್ತಾದರೂ ಮಕ್ಕಳ ಮನದಲ್ಲಿ ಬೇರೂರುವಂತೆ ಮಾಡಬೇಕಿದೆ. ಶಿಸ್ತಿನ ಪಥಸಂಚಲನ ಹಾಗೂ ಮಹನೀಯರ ವೇಷಭೂಷಣಕ್ಕೆ ಗಮನಹರಿಸಿ ಎಂದರು.


ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ. ಶಿಕ್ಷಕರು ಅನಗತ್ಯ ಭಾಷಣ ಬಿಟ್ಟು, ಮಕ್ಕಳ ಭಾಷಣಕ್ಕೆ ಆದ್ಯತೆ ನೀಡಿ. ಪ್ಲಾಸ್ಟಿಕ್ ಧ್ವಜ ಬೇಡ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಲಘು ಉಪಾಹಾರ ವ್ಯವಸ್ಥೆ ಮಾಡಿ. ಸಭಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲಿ ಎಂದರು.


ಪ್ರಾಂಶುಪಾಲ ವಿನೋದ್‌ಸಿಂಗ್, ಸದಸ್ಯ ದಿನೇಶ್‌ಬಾಬು, ಉಪಪ್ರಾಂಶುಪಾಲ ಬಸವರಾಜಪ್ಪ, ಕುಮಾರಸ್ವಾಮಿ, ಎಸ್.ಎಂ. ಬಸವರಾಜು, ದೊರೆಸ್ವಾಮಿ, ನಾಗರಾಜು, ಶ್ರೀಕಾಂತ, ಮಮತಾ, ವಿನೂತಾ, ಪಾರ್ವತಿ ಮತ್ತಿತರರಿದ್ದರು.