ಬಾಗಲಕೋಟೆ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಜಿಲ್ಲಾಡಳಿತ, ತಾಲೂಕು ಆಡಳಿತಗಳಿಂದ ಮಂಗಳವಾರ ಸನ್ಮಾನಿಸಲಾಯಿತು.
ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ಲಕ್ಷ್ಮಪ್ಪ ಭರಮಪ್ಪಾ ದೊಡಮನಿ ಅವರನ್ನು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಸನ್ಮಾನಿಸಿ ಅವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶ, ಯೋಧರ ತ್ಯಾಗ ಬಲಿದಾನ ಕುರಿತು ದೊಡಮನಿ ಅವರಿಂದ ಮಾಹಿತಿ ಪಡೆದು ಕುತೂಹಲದಿಂದ ಆಲಿಸಿದರು.
ಜೊತೆಗೆ ಜಮಖಂಡಿ ತಾಲೂಕಿನ ಕುಂಚನೂರ ಹಾಗೂ ಗಣಿ ಗ್ರಾಮದ ಹೋರಾಟಗಾರ ಗೋವಿಂದಪ್ಪ ತಿಪ್ಪಣ್ಣ ಸಂಗಾಪೂರ ಮತ್ತು ಶ್ರೀಮಂತಯ್ಯಾ ರಾಮಯ್ಯ ಮಠಪತಿ ಹಾಗೂ ಐನಾಪೂರ ಗ್ರಾಮದ ಸಿದ್ರಾಮ ಲಕ್ಷ್ಮಣ ಕೆಂಗಾರ ಅವರನ್ನು ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಳ್ಳೂಳ್ಳಿ ಗೌರವಿಸಿದರು.