ಹಾಸನ: ಸ್ವಾತಂತ್ರ್ಯ ಹೋರಾಟಗಾರರ ಅಪರೂಪದ ಅಂಚೆ ಚೀಟಿ ಪ್ರದರ್ಶನಸ್ವಾತಂತ್ರೊೃೀತ್ಸವ ಅಂಗವಾಗಿ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ್ ಅವರ ಸಂಗ್ರಹದ ಸ್ವಾತಂತ್ರ್ಯ ಹೋರಾಟಗಾರರ ಅಪರೂಪದ ಅಂಚೆ ಚೀಟಿ, ಸ್ಟಾಂಪ್ ಪ್ರದರ್ಶನವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಳ್ಳುಗೋಪಾಲ್ ಮತ್ತು ರಾಜ್ಯ ಸಮಿತಿ ಸದಸ್ಯರಾದ ಹೆಚ್.ಬಿ. ಮದನ್ ಗೌಡ ಉದ್ಘಾಟಿಸಿದರು.
ಬಳಿಕ ಸತೀಶ್ ಮಾತನಾಡಿ, ದಾದಾ ಬಾಯಿ ನವರೋಜಿಯಿಂದ ಹಿಡಿದು ಮಂದಗಾಮಿಗಳು, ತೀವ್ರಗಾಮಿಗಳು, ಕ್ರಾಂತಿಕಾರಿಗಳು ಹಾಗೂ ಗಾಂಧಿಯುಗ ಸೇರಿ ಈ ನಾಲ್ಕು ಘಟ್ಟಗಳಲ್ಲಿ 500 ಸ್ವಾತಂತ್ರ್ಯ ಹೋರಾಟಗಾರರ ವಿಶೇಷ ಅಂಚೆ ಚೀಟಿಗಳು, ಜಗತ್ತಿನ ಮೊದಲ ತ್ರೀಡಿ ಸ್ಟಾಂಪ್, ಮೊದಲ ಪ್ಲಾಸ್ಟಿಕ್ ಸ್ಟಾಂಪ್, ಬಿದರಿನ ವಿಶೇಷ ಅಂಚೆ ಕೋಟೆ, ಖಾದಿಯ ವಿಶೇಷ ಅಂಚೆ ಚೀಟಿ, ರೇಷ್ಮೆಯ ಅಂಚೆ ಚೀಟಿಯನ್ನು ವೀಕ್ಷಣೆ ಮಾಡಬಹುದು ಎಂದರು.
ನಮ್ಮ ದೇಶದ ಎಲ್ಲಾ ರಾಜಧಾನಿಗಳು, ಎಲ್ಲಾ ರಾಜ್ಯಗಳ ಸ್ವಾತಂತ್ರೃ ಹೋರಾಟಗಾರರ ಅಂಚೆ ಚೀಟಿ ಸಂಗ್ರಹ ಮಾಡಲಾಗಿದೆ. ನಾನು ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದು, ಜಿಲ್ಲೆಯ ಎಲ್ಲಾ ನ್ಯಾಯಾಧೀಶರು ಸಹಕಾರ ನೀಡಿದ್ದರಿಂದ ಇಷ್ಟು ಮಾಡಲು ಸಾಧ್ಯವಾಗಿದೆ. 500 ಸ್ವಾತಂತ್ರೃ ಹೋರಾಟಗಾರರ ವಿಶೇಷ ಅಂಚೆ ಚೀಟಿಗಳ ಸಂಗ್ರಹ ಮಾಡಿದ ಮೊದಲ ಭಾರತೀಯ ಎಂದು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಆಗಿದೆ. 10 ಸಾವಿರ ಬಿ.ಆರ್. ಅಂಬೇಡ್ಕರ್ ನಾಣ್ಯವನ್ನು ಸಂಗ್ರಹ ಮಾಡಿದ ಮೊದಲ ಭಾರತೀಯ ಎಂದು ಅದು ಕೂಡ ರೆಕಾರ್ಡ್ ಆಗಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಚ್. ವೇಣುಕುಮಾರ್, ಎನ್. ನಂಜುಂಡೇಗೌಡ, ಪ್ರಧಾನ ಕಾರ್ಯದರ್ಶಿ ಬನವಾಸೆ ಮಂಜು, ಹಿರಿಯ ಪತ್ರಕರ್ತ ಜಗದೀಶ್, ಶಿವರಾಮ್, ಎಸ್.ಆರ್. ಪ್ರಸನ್ನಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.