ಜಿಲ್ಲೆ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಕೀಲರ ಪಾತ್ರ ಸ್ಮರಣೀಯ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ಉತ್ತಮ ಮತ್ತು ಬಲಿಷ್ಠ ಸಮಾಜ ನಿರ್ವಿುಸುವಲ್ಲಿ ವಕೀಲರ ಪಾತ್ರ ಪ್ರಮುಖವಾದುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಹೇಳಿದರು.

ಇಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಕೀಲರ ಪಾತ್ರ ಸ್ಮರಣೀಯ. ಸಮಾಜದ ಎಲ್ಲ ವರ್ಗಗಳಿಂದ ವಕೀಲರು ಗೌರವಿಸಲ್ಪಡುತ್ತಾರೆ. ಅದನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದರು.

1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಂಕರ ರೆಡ್ಡಿ ಮಾತನಾಡಿ, ಉತ್ತಮ ವಕೀಲರು ಇದ್ದಲ್ಲಿ ಮಾತ್ರ ನ್ಯಾಯಾಧೀಶರು ಉತ್ತಮ ತೀರ್ಪು ನೀಡಲು ಸಹಕಾರಿಯಾಗುತ್ತದೆ. ಶಿರಸಿ ನ್ಯಾಯಾಲಯದ ವಕೀಲರು ಉತ್ತಮ ಪಾಂಡಿತ್ಯ ಹೊಂದಿದ್ದಾರೆ. ಇಲ್ಲಿ ಕೆಲಸ ಮಾಡಿದ ನ್ಯಾಯಧೀಶರಿಗೆ ಕಾನೂನಿನ ಉತ್ತಮ ಜ್ಞಾನ ದೊರೆಯವುದರಲ್ಲಿ ಸಂದೇಹವಿಲ್ಲ. ನಾನು ಕೂಡ ಶಿರಸಿ ನ್ಯಾಯಾಲಯದ ವಕೀಲರಿಂದ ಸಾಕಷ್ಟು ಜ್ಞಾನ ಪಡೆದಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ನಾಯ್ಕ ಮಾತನಾಡಿ, ವಕೀಲರು ಶ್ರಮವಹಿಸಿದಲ್ಲಿ ಉತ್ತಮ ಭವಿಷ್ಯ ನಿರ್ವಿುಸಿಕೊಳ್ಳಲು ಸಾಧ್ಯ ಎಂದರು. ಹಿರಿಯ ವಕೀಲರಾದ ಅರುಣಾಚಲ ಪಿ. ಹೆಗಡೆ, ವಕೀಲರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದರು.

ನ್ಯಾಯಧೀಶರಾದ ರಾಜು ಶಡಬಾಲ್ಕರ, ಹಿರಿಯ ವಕೀಲ ಆರ್.ಎಸ್. ಭಟ್ಟ, ಎ. ರವೀಂದ್ರ ನಾಯ್ಕ, ಸರ್ಕಾರಿ ಸಹಾಯಕ ಅಭಿಯೋಜಕಿ ಸೋಫಿಯಾ ಇನಾಮದಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಕೀಲರು ಪಾಲ್ಗೊಂಡಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಈಶ್ವರ ನಾಯ್ಕ ನಿರ್ವಹಿಸಿದರು.