ಹಾಸನ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಅನೇಕ ಸ್ತ್ರೀಯರು ಬ್ರಿಟಿಷ್‌ರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಸ್ತ್ರೀಯರು ನಾನಾ ರೀತಿಯಲ್ಲಿ ಸ್ವಾತಂತ್ರೃ ಚಳವಳಿಗೆ ಸಹಕಾರ ನೀಡಿದ್ದಾರೆ ಎಂದು ವಾಗ್ಮಿ ಎಚ್.ಕೆ.ಸತೀಶ್ ಹೇಳಿದರು.
ನಗರದ ಸಂಸ್ಕೃತ ಭವನದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ತ್ರೀಯರ ಪಾತ್ರ ಎಂಬ ವಿಷಯದ ಬಗ್ಗೆ ಮಾಸಿಕ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಓನಕೆ ಓಬವ್ವ, ರಾಣಿ ಅಬ್ಬಕ್ಕ ದೇವಿ ಹೀಗೆ ಅನೇಕ ಮಹಿಳೆಯರು ಹೆಸರನ್ನು ಮಾತ್ರ ನಾವು ಕೇಳಿದ್ದೇವೆ. ಆದರೆ ಇನ್ನೂ ಅನೇಕ ಕರ್ನಾಟಕದ ಸ್ತ್ರೀಯರು ಸಹ ಬ್ರಿಟಿಷ್‌ರಿಂದ ಭಾರತವನ್ನು ಮುಕ್ತಿಗೊಳಿಸಲು ಸಂಗ್ರಾಮದಲ್ಲಿ ಭಾಗವಹಿಸಿದ್ದಾರೆ ಎಂದರು.
ನಮ್ಮ ದುರಾದೃಷ್ಟವೆಂದರೆ ಸ್ವಾತಂತ್ರೃ ಹೋರಾಟದಲ್ಲಿ ಕೆಲವೇ ಕೆಲವು ಸ್ತ್ರೀಯರ ಹೆಸರು ಮಾತ್ರ ನಾವು ಕೇಳಿದ್ದೇವೆ. ಆದರೆ ತಮ್ಮ ದೇಹವನ್ನು ತ್ಯಾಗ ಮಾಡಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಅನೇಕ ಮಹಿಳೆಯರು ಇದ್ದಾರೆ. ಅಂತಹವರ ಪರಿಚಯ ನಮಗೆಲ್ಲಾ ಆಗಲೆಂದೇ ಸರ್ಕಾರವು ನಾಣ್ಯಗಳ ಮೇಲೆ, ಅನೇಕ ಅಂಚೆ- ಲಕೋಟೆಗಳ ಮೇಲೆ ಮತ್ತು ಸ್ಟ್ಯಾಂಪ್‌ಗಳನ್ನು ಬಿಡುಗಡೆಗೊಳಿಸಿದೆ. ಇದರ ಮುಖ್ಯ ಉದ್ದೇಶವೇ ಆ ಮಹಿಳೆಯರ ವಿಶೇಷತೆಯನ್ನು ಜಗತ್ತಿಗೆ ಸಾರುವುದಾಗಿ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ಸಂಘದ ಸಹಕಾರ್ಯದರ್ಶಿ ನಮಿತಾ ಗೋಪಾಲ್ ವಹಿಸಿದ್ದರು. ಬಿ.ಎಸ್.ರಂಗನಾಥ್ ಅನಿರುದ್ಧ, ಶಿವರಂಜನಿ, ರಮೇಶ್ ಮೂಲಿಮನಿ ಇತರರು ಇದ್ದರು.