ಕೊಪ್ಪಳ:ಅನೇಕರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರೃ ದೊರೆತಿದೆ. ಹೋರಾಟದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಪ್ರಮುಖವಾಗಿದೆ ಎಂದು ಇತಿಹಾಸ ಉಪನ್ಯಾಸಕ ಡಾ.ರಾಜು ಹೊಸಮನಿ ಹೇಳಿದರು.
ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕೆ ತಮ್ಮ ತನು-ಮನ-ಧನವನ್ನು ತ್ಯಾಗ ಮಾಡಿದವರನ್ನು ನೆನೆಯಬೇಕಿದೆ. ಗಾಂಧೀಜಿ ತ್ಯಾಗ, ಅಹಿಂಸಾವಾದ ಮತ್ತು ಸತ್ಯಾಗ್ರಹದ ಪರಿಣಾಮ ದೇಶ ಸ್ವಾತಂತ್ರಗೊಳ್ಳಲು ಸಾಧ್ಯವಾಯಿತು. ಎಲ್ಲರೂ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಅಭಿಯಾನ ಆರಂಭಿಸಿದರು. ಅದೆಲ್ಲವನ್ನು ನಮ್ಮ ಯುವಕರು ಅರಿಯಬೇಕು. ಸ್ವಾತಂತ್ರೃ ಹೋರಾಟದ ಅವಿಸ್ಮರಣೀಯ ಕ್ಷಣಗಳನ್ನು ತಿಳಿಸಬೇಕು. ಯುವಕರು ದೇಶ ಪ್ರೇಮ, ವಿಶ್ವ ಬಂಧುತ್ವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಉಪ ಪ್ರಾಚಾರ್ಯ ಡಾ.ಕರಿಬಸವೇಶ್ವರ ಎನ್‌ಸಿಸಿ ಕ್ಯಾಡೆಟ್‌ಗಳ ಶಿಸ್ತು, ಸಮಯ ಪ್ರಜ್ಞೆ ಮತ್ತು ದೇಶಾಭಿಮಾನ ಅನುಕರಣೀಯ ಎಂದರು. ಕ್ಯಾಡೆಟ್‌ಗಳು ಕ್ವಿಟ್ ಇಂಡಿಯಾ ಜಾಥಾದಲ್ಲಿ ಪಾಲ್ಗೊಂಡು ಜನಜಾಗೃತಿ ಮೂಡಿಸಿದರು. ಎನ್‌ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ದಯಾನಂದ ಸಾಳುಂಕೆ, ಸೀನಿಯರ್ ಕ್ಯಾಡೆಟ್ ಪ್ರೀತಿ ಎಂ.ಇತರರಿದ್ದರು.