ಯಳಂದೂರು: ರಾಜ್ಯಕಂಡ ಅಪರೂಪದ ರಾಜಕಾರಣಿ, ಸಮಾಜ ಸುಧಾರಕರಲ್ಲಿ ದೇವರಾಜು ಅರಸು ಅಗ್ರಗಣ್ಯರಾಗಿದ್ದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸೂಕ್ತ ಚಿಕಿತ್ಸೆ ನೀಡಿದ ಮುತ್ಸದ್ದಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿದ್ದ ಮಲ ಹೊರುವ ಅನಿಷ್ಠ ಪದ್ಧತಿ ರದ್ದು, ಭಾಗ್ಯಜ್ಯೋತಿ ಯೋಜನೆ ಜಾರಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಳುವವನಿಗೆ ಭೂಮಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ದೇಶದಲ್ಲೇ ಮಾದರಿಯಾದರು. ಕಬಿನಿ ನೀರಾವರಿ ಯೋಜನೆಯನ್ನು ಜಾರಿ ಸೇರಿದಂತೆ ಹಲವು ಪ್ರಥಮಗಳನ್ನು ನೀಡಿ ಜನ ಸಾಮಾನ್ಯರ ಮುಖ್ಯಮಂತ್ರಿಯಾಗಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದರು.
ಮುಖ್ಯ ಭಾಷಣಕಾರ ಮಳವಳ್ಳಿ ಬಿ.ಇಡಿ ಕಾಲೇಜಿನ ಉಪನ್ಯಾಸಕ ಶ್ರೀಕಾಂತ್ ಮಾತನಾಡಿ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಆಡಳಿತ ನೀಡಿದ ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿಯಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ರಾಜ್ಯದ ಅಭಿವೃದ್ಧಿಗೆ ಶ್ರೀಕಾರ ಹಾಕಿದ ಮುತ್ಸದ್ದಿ. ಬಡವರ ಪರಹೆಚ್ಚು ಕಾಳಜಿ ಇದ್ದ ಇವರು ಬಡವರ ಮನೆಯ ಭಾಗ್ಯಜ್ಯೋತಿ ಎಂದೇ ಇಂದಿಗೂ ಪ್ರಸಿದ್ಧಿ ಪಡೆದಿದ್ದಾರೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ವಡಗೆರೆದಾಸ್, ತಹಸೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಬಿಇಒ ಕಾಂತರಾಜು, ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿ ಟಿ.ಎಸ್.ಮಲ್ಲಿಕಾರ್ಜುನ್, ಪಿಎಸ್‌ಐ ಚಂದ್ರಹಾಸ್, ಎಚ್.ವಿ. ಚಂದ್ರು, ರಾಧಾ, ಭಾಗ್ಯಲಕ್ಷ್ಮೀ, ಅಶ್ವತ್ಥನಾರಾಯಣ್, ಕುಮಾರ್, ತಾರಾ ಜಡೆಯಪ್ಪ, ಅಂಬಿಕಾ ಹಾಜರಿದ್ದರು.