ಚಿಕ್ಕಬಳ್ಳಾಪುರ: ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕನ್ನು ತ್ಯಜಿಸಿ, ಸ್ವಾಸ್ಥ್ಯ ಜೀವನವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್.ಜೆ.ಮಿಸ್ಕಿನ್ ಸಲಹೆ ನೀಡಿದರು.
ನಗರದ ಕೆ.ವಿ ಐ.ಟಿ.ಐ ಕಾಲೇಜಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ನಿಯಂತ್ರಣ ಕೋಶ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ತಂಬಾಕು ಸೇವನೆಯು ಮನುಷ್ಯನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು, ಹಾಗೆಯೇ ಮನುಷ್ಯನಿಗೆ ಎಷ್ಟ್ಟೇ ಹಣವಿದ್ದರೂ ವಾಸಿ ಮಾಡಿಕೊಳ್ಳಲು ಸಾಧ್ಯವಾಗದೇ ಇರುವಂತಹ ಅನೇಕ ಕಾಯಿಲೆಗಳು ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಅನೇಕರು ದುಶ್ಚಟ ಬಿಡದಿರುವುದು ದುರುದೃಷ್ಟಕರ ಎಂದರು.
ಪ್ರತಿಯೊಬ್ಬರು ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಾರಕ ತಂಬಾಕು, ಮದ್ಯ ಸೇವಿಸಬಾರದು. ಸ್ವಯಂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಕುಟುಂಬದವರ ಬಗ್ಗೆಯೂ ಕಾಳಜಿ ತೋರಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ, ತಂಬಾಕು ಮನುಷ್ಯನಿಗೆ ಮಾತ್ರವಲ್ಲ, ಪರಿಸರಕ್ಕೂ ಸಹ ಮಾರಕ. ಬೀಡಿ, ಸಿಗರೇಟು ಉತ್ಪನ್ನಗಳಲ್ಲಿ 4000ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳಿದ್ದು, ಸಿಗರೇಟು ಸೇವಿಸಿ ಬಿಸಾಡುವ ತುಂಡುಗಳಲ್ಲಿರುವ ನಿಕೋಟಿನ್, ಲೆಡ್ ಹಾಗೂ ಪ್ಲಾಸ್ಟಿಕ್ ನಂತಹ ಪದಾರ್ಥಗಳು ನೀರಿನಲ್ಲಿ ಸೇರಿ ಜಲಚರಗಳು ನಾಶವಾಗುತ್ತಿವೆ. ಇಂಗಾಲದ ಡೈಆಕ್ಸೈಡ್ ಹೆಚ್ಚಳವು ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಐಟಿಐ ಕಾಲೇಜಿನ ಪ್ರಾಂಶುಪಾಲ ಹನುಮಂತರೆಡ್ಡಿ, ಹದಿಹರೆಯದ ವಿದ್ಯಾರ್ಥಿಗಳು ಕುತೂಹಲ ಮತ್ತು ಕ್ಷಣಿಕ ಸುಖಕ್ಕಾಗಿ ತಂಬಾಕು ಸೇವನೆ ಮಾಡಿ, ಬಳಿಕ ನಿರಂತರವಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದು ಜೀವನವನ್ನು ಹಾಳುಗೆಡುವುತ್ತಿದ್ದು ಪ್ರತಿಯೊಬ್ಬರೂ ಮನಸ್ಸನ್ನು ಹಿಡಿತದಲ್ಲಿರಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರುದ್ರಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳಾ ಮತ್ತಿತರರು ಇದ್ದರು.
ಆಸ್ಪತ್ರೆಯಲ್ಲಿ ಉಚಿತ ಸಮಾಲೋಚನೆ: ಹದಿಹರೆಯದವರು ಹೆಚ್ಚಾಗಿ ತಂಬಾಕು ವ್ಯಸನಕ್ಕೆ ತುತ್ತಾಗಿ ಬಾಯಿ ಕ್ಯಾನ್ಸರ್, ಗ್ಯಾಂಗ್ರಿನ್ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಸೇರಿ ಅನೇಕ ರೀತಿಯ ಕಾಯಿಲೆಗಳಿಗೆ ನೋವು ಅನುಭವಿಸುತ್ತಿದ್ದಾರೆ. ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಸರಾಸರಿ 4ರಿಂದ 5 ಜನ ಬಾಯಿ ಹುಣ್ಣಿನಂತಹ ವ್ಯಕ್ತಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ದುಶ್ಚಟಗಳು ಹೆಚ್ಚಾದಂತೆ ರೋಗಿಗಳ ಸಂಖ್ಯೆಯು ಏರಿಕೆಯಾಗುತ್ತದೆ. ಇನ್ನು ಮಾರಕ ತಂಬಾಕು ಸೇವನೆ ತ್ಯಜಿಸಲು ಇಚ್ಛಿಸುವವರಿಗೆ ಆಸ್ಪತ್ರೆಯ ಕೊಠಡಿ ಸಂಖ್ಯೆ 156ರಲ್ಲಿ ಉಚಿತ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ ಹಾಗೂ ನಿಕೋಟಿನ್ ಗಮ್ಸ್ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ಜನರು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ದಂತ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾ ಸಲಹೆ ನೀಡಿದರು.
ಪ್ರತಿಜ್ಞಾ ವಿಧಿ ಬೋಧನೆ: ಆರೋಗ್ಯಕರ ಜೀವನಕ್ಕೆ ತಂಬಾಕು ತ್ಯಜಿಸುವ ಪ್ರತಿಜ್ಞಾ ವಿಧಿಯನ್ನು ನ್ಯಾಯಾಧೀಶರು ಬೋಧಿಸಿದರು. ಕಾಲೇಜಿನ ಆವರಣದಲ್ಲಿ ಸಸಿ ನೆಡುವುದರೊಂದಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಂಬಾಕು ಪರಿಸರಕ್ಕೆ ಮಾರಕ ಎಂಬುದರ ಅರಿವು ಮೂಡಿಸಲಾಯಿತು.