ಶಿರಸಿ: ತಾಲೂಕು ಹಾಗೂ ಹೊರ ತಾಲೂಕುಗಳಲ್ಲಿ ಕರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವನ್ನು ಅನಿರ್ದಿಷ್ಠಾವಧಿಯವರೆಗೆ ಸ್ವಯಂಘೊಷಿತ ಲಾಕ್ಡೌನ್ ಮಾಡಲಾಗಿದೆ ಎಂದು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.
ಮಠದಲ್ಲಿ ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಶ್ರೀಗಳು, ಅನೇಕ ಮಠ, ದೇವಾಲಯಗಳು ಈ ಹಿಂದೆ ತಾವಾಗಿಯೇ ಲಾಕ್ಡೌನ್ ನಿಯಮಗಳನ್ನು ಅನುಸರಿಸಿವೆ. ಆದರೂ ಮಠದಲ್ಲಿ ಹಲವು ನಿಯಮಗಳನ್ನು ಅನುಸರಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಠದ ಶಿಷ್ಯರಿಂದ ಪಾದಪೂಜೆ, ಭಿಕ್ಷಾ ಸೇವೆ ಹಾಗೂ ಮೊದಲೇ ದೂರವಾಣಿ ಮೂಲಕ ಅನುಮತಿ ಪಡೆದು ಬಂದವರಿಗೆ ದಿನಕ್ಕೆ 10 ಜನರ ಮಿತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಲಾಕ್ಡೌನ್ ನಿಯಮಗಳನ್ನು ಅನುಸರಿಸಲಾಗುವುದು. ಅನುಷ್ಠಾನದ ಹೊರತಾಗಿ ಚಾತುರ್ವಸ್ಯದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗುವುದು. ಕಾರಣ ಸದ್ಭಕ್ತರೆಲ್ಲರೂ ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ದೇವರನ್ನು ಭಜಿಸಿ ರೋಗದ ವಿರುದ್ಧ ಜಯಿಸಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳನ್ನು ತಾವೇ ಲಾಕ್ಡೌನ್ ಮಾಡಿಕೊಳ್ಳಬೇಕು. ಅನಗತ್ಯ ಪ್ರಯಾಣಗಳನ್ನು ಬಿಡಬೇಕು. ಮದುವೆ ಮುಂತಾದ ಸಮಾರಂಭಗಳನ್ನು ಮುಂದೂಡಬೇಕು. ಕರೊನಾ ವೈರಸ್ ಹರಡುವಿಕೆ ನಿರ್ಣಾಯಕ ಹಂತಕ್ಕೆ ತಲುಪಿದೆ. ಈಗ ಎಚ್ಚರ ತಪ್ಪಿದರೆ ಮುಂದೆ ತುಂಬಾ ಗಂಭೀರ ಪರಿಸ್ಥಿತಿ ಎದುರಿಸುವ ಅಪಾಯವಿದೆ. ಆದ್ದರಿಂದ ನಿರ್ಲಕ್ಷ್ಯ ಮಾಡದೆ ಎಲ್ಲರೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಹಿಂದೆ ಅನೇಕ ಜಪ- ಸ್ತೋತ್ರ- ಹೋಮಗಳನ್ನು ನಡೆಸಲು ತಿಳಿಸಲಾಗಿತ್ತು. ಅವುಗಳನ್ನು ಈಗ ಮತ್ತೆ ಮಾಡುವ ಅವಶ್ಯಕತೆಯಿದೆ. ಸಾಧ್ಯವಾದಷ್ಟು ಜಪ, ಹೋಮ, ಸ್ತೋತ್ರಗಳನ್ನು ಈಗ ಮನೆಯಲ್ಲಿ ಮಾಡಬೇಕು. ಸರ್ಕಾರವು ಹಿಂದೆ ತಿಳಿಸಿದ ನಿಯಮಗಳನ್ನು ಪಾಲನೆ ಮಾಡುತ್ತ ದೇವರ ಅನುಗ್ರಹ ಪಡೆಯುತ್ತ ಹೋದರೆ ಮಾತ್ರವೇ ಈ ಗಂಭೀರ ಅಪಾಯದಿಂದ ನಾವೆಲ್ಲರೂ ಪಾರಾಗಲು ಸಾಧ್ಯ ಎಂದು ಶ್ರೀಗಳು ಹೇಳಿದರು.