ಚಾಮರಾಜನಗರ: ಮೈಸೂರು ಭಾಗದಲ್ಲಿ ಸ್ವರ್ಣಗೌರಿ ದೇಗುಲವಿರುವ ಕೆಲವೇ ಜಿಲ್ಲೆಗಳಲ್ಲಿ ಚಾಮರಾಜನಗರವೂ ಒಂದು. ಎಲ್ಲೆಡೆ ಗಣೇಶನ ಪ್ರತಿಷ್ಠಾಪನೆಗೆ ಪ್ರಧಾನ ಆದ್ಯತೆ ನೀಡಿದರೆ, ಇಲ್ಲಿರುವ ಕುದೇರು ಗ್ರಾಮದ ಸ್ವರ್ಣಗೌರಿ ದೇವಸ್ಥಾನದಲ್ಲಿ ಗೌರಿ ಮೂರ್ತಿ ಇಟ್ಟು ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ತಾಲೂಕಿನ ಕುದೇರು ಗ್ರಾಮದಲ್ಲಿರುವ ಸ್ವರ್ಣಗೌರಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇಗುಲದಲ್ಲಿ ಗೌರಿ-ಗಣೇಶ ಹಬ್ಬದ ದಿನ ಗಣೇಶ ಮೂರ್ತಿಗಿಂತ ಗೌರಿ ಪ್ರತಿಷ್ಠಾಪನೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಹಲವು ವರ್ಷಗಳಿಂದ ಗೌರಿ ಪೂಜೆ ಮಾಡುತ್ತಿರುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿರುವುದೇ ಈ ಆಚರಣೆಯ ಸರಳ ಕಾರಣವಾಗಿದೆ.
ಕೆರೆಯಿಂದ ಮಣ್ಣು ಬಳಕೆ: ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡುವ ಗೌರಿಯ ನಿರ್ಮಾಣಕ್ಕಾಗಿ ಯಮುನಾ ಕೆರೆ ಅಥವಾ ಗೌರಿ ಕೆರೆಯಿಂದ ಮಣ್ಣು ತರಲಾಗುತ್ತದೆ. ಈ ಕಾರ್ಯವನ್ನು ಆ.26ರಂದು ನಡೆಸಲಾಗುತ್ತದೆ. ಕೆರೆ ತಡದಲ್ಲಿ ಮರಳಿನಿಂದ ಮಾಡಿದ ಶಿವಲಿಂಗ ರೂಪದ ಗೌರಿಯನ್ನು ತರಲಾಗುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗೌರಿಯನ್ನು ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ವೇಳೆ ಗ್ರಾಮಸ್ಥರು ಗೌರಿ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಎರಡು ವಾರ ವಿಶೇಷ ಪೂಜೆ: ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಿದ ಗೌರಿಗೆ ಎರಡು ವಾರಗಳ ಕಾಲ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. 12 ದಿನಗಳ ಪೂಜಾ ಕಾರ್ಯಕ್ರಮದಲ್ಲಿ 5ನೇ ದಿನಕ್ಕೆ ಗೌರಿಗೆ ಸುವರ್ಣ ಅಲಂಕಾರ ಮಾಡಿ ವಿಶೇಷವಾಗಿ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಗೌರಿಯೊಂದಿಗೆ ಪ್ರತಿಷ್ಠಾಪನೆಯಾಗುವ ಗಣೇಶನ ಮೂರ್ತಿಗೂ ವಿಶೇಷ ಪೂಜೆಗಳು ಜರುಗುತ್ತವೆ. ಮಹಿಳಾ ಭಕ್ತರು ದೇಗುಲಕ್ಕೆ ಭೇಟಿ ನೀಡಿ, ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. 12 ದಿನಗಳ ಹಬ್ಬದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ದಿನ ಸೆ.6 ರಂದು ವಿಜೃಂಭಣೆಯ ಉತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಚಾಮರಾಜನಗರ ಮತ್ತು ಹೊರ ಜಿಲ್ಲೆಗಳ ಭಕ್ತರು ಪಾಲ್ಗೊಳ್ಳುತ್ತಾರೆ. ಗ್ರಾಮದ ನೆಂಟರ ಮನೆಗಳಿಗೆ ಸಂಬಂಧಿಕರು ಭೇಟಿ ನೀಡಿ, ಹಬ್ಬ ಆಚರಣೆ ಮಾಡುತ್ತಾರೆ. ಊರಲ್ಲಿ ಗೌರಿ-ಗಣೇಶ ಹಬ್ಬ ಕಳೆಗಟ್ಟುತ್ತದೆ. ಹಳ್ಳಿ ಸೊಗಡಿನ ಸಂಭ್ರಮ ಹಬ್ಬದ ಮೆರುಗು ಹೆಚ್ಚಿಸುತ್ತದೆ.
ಗೌರಮ್ಮ ಗೌರಮ್ಮ ಬಾಗಿನ ಕೊಡು ಗಣೇಶನಿಗೂ ಮೊದಲು ಗೌರಿ ಪೂಜೆ ಮಾಡಲಾಗುತ್ತದೆ. ಗೌರಿಗೆ ಬಾಗಿನ ಅರ್ಪಿಸಿ, ಮುತ್ತೈದೆರಿಗೆ ಬಾಗಿನ ಅರ್ಪಿಸುವುದು ಪದ್ಧತಿ. ಕುದೇರು ಗ್ರಾಮದ ಸ್ವರ್ಣಗೌರಿ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡುವ ಗೌರಿಗೆ ಮಹಿಳೆಯರು ಬಾಗಿನ ನೀಡುತ್ತಾರೆ. ಬಾಗಿನ ಎಂದರೆ ಸಮೃದ್ಧಿಯನ್ನು ಹಾರೈಸುವ ಉಡುಗೊರೆಯಾಗಿದೆ. ಮನೆ-ಮಗಳಿಗೆ ಹೊಸ ಬಟ್ಟೆ, ನಗದು ಸಹಿತ ಬಾಗಿನದ ಉಡುಗೊರೆ ನೀಡುವುದು ವಾಡಿಕೆ. ಆದರಿಲ್ಲಿ ಗೌರಿಗೆ ಬಾಗಿನ ಅರ್ಪಿಸುವ ಮಹಿಳೆಯರು ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ. ಈ ಬಾಗಿನದ ಪದಾರ್ಥಗಳಲ್ಲಿ ಪ್ರಸಾದ ತಯಾರಿಸುವ ದೇವಸ್ಥಾನದವರು ಗೌರಿ-ಗಣೇಶ ಮೂರ್ತಿ ವಿಸರ್ಜನೆ ದಿನ ಭಕ್ತರಿಗೆ ವಿತರಣೆ ಮಾಡುತ್ತಾರೆ.
ಸ್ವರ್ಣಗೌರಿ ದೇಗುಲದಲ್ಲಿ ಆ.26ರಂದು ಗೌರಿ ಪ್ರತಿಷ್ಠಾಪನೆ ಮಾಡಿ ಸೆ.6ರಂದು ವಿಸರ್ಜನಾ ಮಹೋತ್ಸವವನ್ನು ನಡೆಸಲಾಗುತ್ತದೆ. ಒಟ್ಟು 12 ದಿನಗಳ ಕಾಲ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಉಮೇಶ್ ಸ್ವರ್ಣಗೌರಿ ದೇವಸ್ಥಾನದ ಅರ್ಚಕ, ಕುದೇರು, ಚಾಮರಾಜನಗರ