ಜಿಲ್ಲೆ

ಸ್ವರೂಪ್‌ಗೆ ದಲಿತ ಸಂಘಟನೆ ಸಮನ್ವಯ ಸಮಿತಿ ಬೆಂಬಲ

ಹಾಸನ: ಜಿಲ್ಲೆಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ.ಸ್ವರೂಪ್‌ಗೆ ಬೆಂಬಲ ನೀಡುವುದಾಗಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣದಾಸ್ ತಿಳಿಸಿದರು.

ಏ.21 ರಂದು ದಲಿತ ಸಂಘಟನೆಗಳ ಸಮಾನ ಮನಸ್ಕರು, ಹಿರಿಯ ಮುಖಂಡರು ಸಭೆ ಸೇರಿ ಚರ್ಚಿಸಿ ಹಾಸನ ಕ್ಷೇತ್ರದಲ್ಲಿ ಕೋಮುವಾದಿ, ಜಾತಿವಾದಿ, ದಲಿತ ವಿರೋಧಿ ಭ್ರಷ್ಟ ಬಿಜೆಪಿ ಸೋಲಿಸಲು ಹೆಚ್.ಪಿ.ಸ್ವರೂಪ್ ಅವರನ್ನು ಬೆಂಬಲಿಸುತ್ತಿದ್ದೇವೆ. ಜಿಲ್ಲೆಯ ಇತರೆಡೆ ಬಿಜೆಪಿ ಸೋಲಿಸುವ ಶಕ್ತಿ ಜೆಡಿಎಸ್ ಅಥವಾ ಕಾಂಗ್ರೆಸ್ ಅಭ್ಯರ್ಥಿಗಿದ್ದರೆ ಅವರಿಗೆ ಬೆಂಬಲ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ದಲಿತರ ಬದುಕುವ ಹಕ್ಕನ್ನು ಕಸಿದುಕೊಂಡಿವೆ. ವಿವಿಧ ಧರ್ಮ, ಜಾತಿ, ಭಾಷೆ, ವಿಭಿನ್ನ ಆಚಾರ-ವಿಚಾರ, ಬಹು ಸಂಸ್ಕೃತಿಯ ನೆಲೆ ಬೀಡಾಗಿರುವ ಕರ್ನಾಟಕದಲ್ಲಿ ಕಳೆದ ಮರ‌್ನಾಲ್ಕು ವರ್ಷಗಳಿಂದ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಜನರ ಮನಸ್ಸನ್ನು ಘಾಸಿಗೊಳಿಸಿದೆ ಎಂದು ದೂರಿದರು.

ಸಮ ಸಮಾಜದ ನಿರ್ಮಾಣಕ್ಕಾಗಿ ಸಂವಿಧಾನದಲ್ಲಿ ನೀಡಲಾಗಿರುವ ಮೀಸಲಾತಿ ನೀತಿಯನ್ನು ದುರ್ಬಲಗೊಳಿಸಲಾಗುತ್ತಿದೆ. ಸರ್ಕಾರಿ ಒಡೆತನದಲ್ಲಿರುವ ಉದ್ದಿಮೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸದನದಲ್ಲಾಗಲೀ ಅಥವಾ ಸಾರ್ವಜನಿಕವಾಗಲಿ ಬಹಿರಂಗ ಚರ್ಚೆಗೊಳಪಡಿಸದೆ ಕೇವಲ ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸುಗಳನ್ನು ಅಸಮರ್ಪಕವಾಗಿ ಜಾರಿಗೊಳಿಸಿ, ಪರಿಶಿಷ್ಟ ಜಾತಿಯ 101 ಜಾತಿಗಳ ನಡುವೆ ಅಸಹನೆ, ದ್ವೇಷ ಹುಟ್ಟು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಲವು ನೇಮಕಾತಿಯಲ್ಲಿ ಅಕ್ರಮ ಮಿತಿ ಮೀರಿದೆ. ಹೀಗಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತಂಗೌಡ ಅವರನ್ನು ಸೋಲಿಸಲು ನಾವು ಈ ತೀರ್ಮಾನ ಕೈಗೊಂಡಿದ್ದು, ಆ ತಾಲೂಕಿನಲ್ಲಿ ಸ್ಥಳೀಯ ಮುಖಂಡರು ನಿರ್ಧರಿಸುವರು ಎಂದು ಹೇಳಿದರು.

ಸಮಿತಿ ಉಪಾಧ್ಯಕ್ಷ ಹೆಚ್.ಕೆ.ಸಂದೇಶ್ ಮಾತನಾಡಿ, ಸಂವಿಧಾನ, ಪ್ರಜಾತಂತ್ರ ವಿರೋಧಿಯಾಗಿರುವ ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ನೀಡಲಾಗುವುದು. ರಾಜ್ಯದಲ್ಲಿ ವಿವಿಧ ದಲಿತ ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ನೀಡಲು ತೀರ್ಮಾನಿಸಿವೆ. ಆದರೆ, ಹಾಸನ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ನೇರ ಪೈಪೋಟಿ ಇರುವುದರಿಂದ ಹೆಚ್.ಪಿ.ಸ್ವರೂಪ್‌ಗೆ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು.

ಸಮಿತಿ ಗೌರವಾಧ್ಯಕ್ಷ ನಾರಾಯಣದಾಸ್, ಅಧ್ಯಕ್ಷ ಕೆ.ಈರಪ್ಪ, ಮುಖಂಡರಾದ ವೀರಭದ್ರಯ್ಯ ಅಣಚನಹಳ್ಳಿ, ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ, ದಂಡೋರ ಸೋಮು ಇದ್ದರು.