ಹಾಸನ : ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಬೆಂಬಲ ಸೂಚಿಸುವುದರ ಜತೆಗೆ ಸಂಗ್ರಹಿಸಿದ 1 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ರಾಜಕೀಯ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭವಾನಿ ರೇವಣ್ಣ, ಅಭ್ಯರ್ಥಿ ಎಚ್.ಪಿ. ಸ್ವರೂಪ್ ಪಾಲ್ಗೊಂಡು ಬೆಂಬಲ ಕೋರಿದರು.
ಈ ವೇಳೆ ಭವಾನಿ ರೇವಣ್ಣ ಮಾತನಾಡಿ, ಕಳೆದ 30 ವರ್ಷಗಳ ಕಾಲ ರಾಜಕಾರಣ ಮಾಡಿದ ಎಚ್.ಎಸ್. ಪ್ರಕಾಶ್ ಅವರು ಎರಡು ಬಾರಿ ಸೋಲು ಅನುಭವಿಸಿ ನಾಲ್ಕು ಬಾರಿ ಶಾಸಕರಾಗಿದ್ದರು. ಜೀವಿತಾವಧಿಯಲ್ಲಿ ಸರಳತೆಯಿಂದ ಇದ್ದವರು. ಈಗ ಅವರ ಪುತ್ರ ಸ್ವರೂಪ್ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರ ಗೆಲುವಿಗಾಗಿ ನಾವು ಪ್ರಚಾರ ಮಾಡುತ್ತಿದ್ದೇವೆ. ಕ್ಷೇತ್ರದ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಅದೇ ರೀತಿ ಕರವೇ ಕೂಡ ಜೆಡಿಎಸ್‌ಗೆ ಬೆಂಬಲಿಸಿರುವುದು ಸಂತೋಷ ತಂದಿದೆ ಎಂದರು.
ನಾನು ಕೂಡ ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಅದಕ್ಕೆ ನಾನಾ ಕಾರಣಗಳಿವೆ. ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾನೆ. ದೇವೇಗೌಡರ ಸೊಸೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆಯಿದೆ. ನನಗೆ ಹಾಸನ ಕ್ಷೇತ್ರವೊಂದೇ ಅಲ್ಲ 224 ಕ್ಷೇತ್ರವು ಸೇರುತ್ತದೆ. ಹಾಸನದಲ್ಲಿ ಏಳಕ್ಕೆ ಏಳು ಕ್ಷೇತ್ರವನ್ನು ಗೆಲ್ಲುವ ವಿಶ್ವಾವಿದೆ ಎಂದು ಹೇಳಿದರು.
ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಸೀತಾರಾಮ್, ಮಾಧ್ಯಮ ವಕ್ತಾರ ರಾಜೇಂದ್ರ ದೊಡ್ಡಮಗ್ಗೆ, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ರಘು ಪಾಳ್ಯ, ಯುವ ಘಟಕದ ಅಧ್ಯಕ್ಷ ಅಭಿಗೌಡ, ರೇಖಾ ಮಂಜುನಾಥ್, ಯುವ ಘಟಕದ ಮಹಿಳಾ ಅಧ್ಯಕ್ಷೆ ದೇವಿಕಾ ಮಧು, ತೌಫಿಕ್ ಪಾಷ ಹಾಗೂ ತಾಲೂಕು ಪದಾದಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.