ಹಾಸನ : ನಗರದ ರಿಂಗ್ ರಸ್ತೆ ಬಳಿ ಇರುವ ಜೆಡಿಎಸ್ ಮುಖಂಡ ಎಚ್.ಪಿ. ಸ್ವರೂಪ್ ಮನೆ ಮುಂದೆ ಅಭಿಮಾನಿಗಳು ಸ್ವರೂಪ್ ಅವರ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಿದರು.
ಸೋಮವಾರ ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಸ್ವರೂಪ್ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಅವರ ಮನೆ ಮುಂದೆ ಜಮಾಯಿಸಿ, ಕೇಕ್ ಕತ್ತರಿಸಿ ಸ್ವರೂಪ್ ಪರ ಜೈಕಾರ ಕೂಗಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಪಿ. ಸ್ವರೂಪ್ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜನ್ಮ ದಿನ ಆಚರಣೆ ಮಾಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಬಾರಿ ಜನಸಂಖ್ಯೆ ಕಡಿಮೆಯಾಗಿದೆ. ಎಲ್ಲರ ಅಭಿಮಾನಕ್ಕೆ ತಾನು ಚಿರಋಣಿ ಎಂದರು.
ಇದೇ ವೇಳೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ. ಇನ್ನೆರಡು ದಿನಗಳಲ್ಲಿ ಪಟ್ಟಿ ಪ್ರಕಟ ಆಗಲಿದೆ. ತಾನು ಕೂಡ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ತನಗೆ ಹಾಸನ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರೆಲ್ಲರೂ ತೀರ್ಮಾನ ಮಾಡಿದಂತೆ ಯಾರಿಗೆ ಟಿಕೆಟ್ ನೀಡಿದರೂ ಬೆಂಬಲಿಸಿ ಗೆಲುವಿಗೆ ಶ್ರಮ ವಹಿಸುತ್ತೇನೆ. ಈ ಬಾರಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಖಚಿತ ಎಂದರು.