ಜಿಲ್ಲೆ

ಸ್ವರೂಪ್ ಗೆದ್ದು ಬರುವುದರಲ್ಲಿ ಅನುಮಾನವಿಲ್ಲ: ಪ್ರಜ್ವಲ್

ಹಾಸನ : ಕ್ಷೇತ್ರದಲ್ಲಿ 3 ದಿನದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ನಮ್ಮ ಅಭ್ಯರ್ಥಿ ಹೆಚ್.ಪಿ.ಸ್ವರೂಪ್ ಗೆದ್ದು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿರು.
ರಂಜಾನ್ ಹಿನ್ನೆಲೆಯಲ್ಲಿ ಶನಿವಾರ ನಗರದ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರಿಗೆ ಶುಭಕೋರಿ ನಂತರ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ.ಸ್ವರೂಪ್ ಅವರೊಂದಿಗೆ 80 ಅಡಿ ರಸ್ತೆ, ಚಿಪ್ಪಿನಕಟ್ಟೆಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಜೆಡಿಎಸ್‌ನಲ್ಲಿ ಕಾರ್ಯಕರ್ತರು, ಮುಖಂಡರು ಇಲ್ಲ ಎನ್ನುತ್ತಿದ್ದರು. ನಮ್ಮ ರೋಡ್ ಶೋ ಆದ ಮೇಲೆ ಬಿಜೆಪಿಯ ಕಾರ್ಯಕರ್ತರು, ಮುಖಂಡರು ಕಾಣಿಸುತ್ತಿಲ್ಲ ಎಂದರು.
ಹಾಸನದಲ್ಲಿ ಎಲ್ಲಿ ನೋಡಿದರೂ ಜೆಡಿಎಸ್ ಬಾವುಟ ಹಾರುತ್ತಿದ್ದು, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೈನಿಕರ ರೀತಿ ಹೋರಾಟಕ್ಕೆ ಇಳಿದಿದ್ದಾರೆ. ಖಂಡಿತವಾಗಿಯೂ ನಾವು ಗೆಲುವು ಸಾಧಿಸುತ್ತೇವೆ. ಚುನಾವಣೆ ಕೇವಲ 20 ದಿನ ಇದೆ. ಆ ದಿನ ಹಾಸನ ತಾಲ್ಲೂಕಿನ ಜನರು ಒಮ್ಮತದಿಂದ ಜೆಡಿಎಸ್‌ಗೆ ಮತ ನೀಡಬೇಕೆಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ನನಗೆ ಭರವಸೆ ಇದೆ, ನೂರಕ್ಕೆ ನೂರು ಭಾಗ ನಾವೇ ಗದ್ದೇ ಗೆಲ್ಲುತ್ತೇವೆ ಎಂದು ಹೇಳಿದರು.
1 ತಿಂಗಳಿನಿಂದ ಇಡೀ ಜಗತ್ತಿನಲ್ಲಿ ಮುಸಲ್ಮಾನ್ ಬಾಂಧವರು ಉಪವಾಸ ಆಚರಣೆ ಮಾಡಿ ಭಕ್ತಿ, ನಿಷ್ಠೆಯನ್ನು ದೇವರಿಗೆ ತೋರಿಸಿದ್ದಾರೆ. ಅವರಿಗೆ ಶುಭ ಕೋರಿದ್ದೇವೆ. ಇವತ್ತಿನ ವಾತಾವರಣ ನೋಡಿದರೆ ಶೇ.95 ರಷ್ಟು ಮುಸಲ್ಮಾನ್ ಜನಾಂಗದವರು ನಮ್ಮನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ ಎಂದರು.
ಚುನಾವಣೆ ಮುಗಿಯುವವರೆಗೂ ನಾನು ಯಾರ ಬಗ್ಗೆನೂ ಮಾತನಾಡಲ್ಲ ಎಂಬ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಈವಾಗ ಬುದ್ಧಿ ಬದಿದೆ, ಮೂರು ವರ್ಷದ ಹಿಂದೆಯೇ ಬಂದಿದ್ದರೆ ಅನುಕೂಲ ಆಗಿರೋದು. ಈಗ ಅವರದ್ದು ಎಲ್ಲಾ ಗೊತ್ತಾಗಿದೆ. ನಾನು ಅವರ ಬಗ್ಗೆ ಮಾತನಾಡಬೇಕಿಲ್ಲ. ಜನರೇ ಮಾತನಾಡುತ್ತಿದ್ದಾರೆ ಏನು ಅಂತ, ಅವರು ಏನೇ ತಂತ್ರಗಾರಿಕೆ ಮಾಡಿದರೂ ನಡೆಯಲ್ಲ. ಅವತ್ತು ಹೊಳೆನರಸೀಪುರದಿಂದ ನಿಲ್ಲುತ್ತೇನೆ ಎಂದು ಮಾಧ್ಯಮದವರನ್ನು ದಿಕ್ಕು ತಪ್ಪಿಸಿದರು, ಅಂತಹ ಯಾವುದೇ ತಂತ್ರಗಾರಿಕೆಗೂ ಕಿವಿ ಕೊಡಲು ನಮ್ಮ ಕಾರ್ಯಕರ್ತರಾಗಲೀ, ಈ ಕ್ಷೇತ್ರದ ಮತದಾರರಾಗಲೀ ತಯಾರಿಲ್ಲ ಎಂದು ತಿರುಗೇಟು ನೀಡಿದರು.
ಈ ಬಾರಿ ನಾವು ಹೆಚ್.ಪಿ.ಸ್ವರೂಪ್ ಅವರನ್ನು ಗೆಲ್ಲಿಸಿಕೊಳ್ಳಬೇಕು, ಜೆಡಿಎಸ್ ಪಕ್ಷ ತರಲೇಬೇಕು ಎಂದು ನಿರ್ಧರಿಸಿದ್ದೇವೆ. ಶಾಸಕರಿಗೆ ಭಯ ಶುರುವಾಗಿದೆಯಾ ಎಂದು ನನ್ನ ಕೇಳುವುದಲ್ಲ. ಅವರ ಕಾರ್ಯಕರ್ತರನ್ನ ಕೇಳಿದ್ರೆ ಗೊತ್ತಾಗುತ್ತೆ ಎಂದರು.
ಹೆಚ್.ಡಿ.ರೇವಣ್ಣ ವಿರುದ್ಧ ಕೆ.ಎಂ.ಶಿವಲಿಂಗೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಖಂಡಿತವಾಗಿಯೂ ಯಾವುದೇ ರೀತಿ ಗಂಭೀರವಾಗಿರಲ್ಲ. ನಾವು ಮಾಡೋದು ಮಾಡೇ ಮಾಡುತ್ತೇವೆ. ಎನ್.ಆರ್.ಸಂತೋಷ್ ಅವರನ್ನು ಗೆಲ್ಲಿಸಬೇಕು. ನಾವೇನಾದರು ಅನ್ಯಾಯ ಮಾಡಿದ್ದರೆ ತಗಿಯಲಿ, ಆವಾಗ ನಾವೂ ತಗೀತೀವಿ. ಇಷ್ಟು ವರ್ಷ ನಮ್ಮ ಪಕ್ಷದಲ್ಲಿದ್ದಾಗ ರೇವಣ್ಣ ಸಾಹೇಬರು ಏನು ಅನ್ಯಾಯ ಮಾಡಿದ್ದಾರೆ ಹೇಳಲಿ, ನಂತರ ನಾವು ಅದಕ್ಕೆ ಉತ್ತರ ಕೊಡುತ್ತೇವೆ. ನಾವು ಮಾಡಿರುವ ಸ್ವಲ್ಪ ಸಹಾಯಕ್ಕಾದರೂ ಅವರಿಗೆ ಕೃತಜ್ಞತೆ ಇರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.