ಹುಣಸೂರು: ಸ್ವಾಯತ್ತೆ, ಸ್ವಯಂ ಆಡಳಿತ ಮತ್ತು ಸ್ವಯಂ ನಿಯಂತ್ರಣದ ಪರಿಕಲ್ಪನೆಯೊಂದಿಗೆ ಸೌಹಾರ್ದ ಸಹಕಾರ ಸಂಘಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ಅಭಿಪ್ರಾಯಪಟ್ಟರು.
ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಮಂಗಳವಾರ ಸೌಹಾರ್ದ ಸಹಕಾರ ರಜತ ಮಹೋತ್ಸವದ ಅಂಗವಾಗಿ ತಾಲೂಕಿನಲ್ಲಿ ಹೊಸ ಸೌಹಾರ್ದ ಸಹಕಾರ ಸಂಘಗಳ ಸ್ಥಾಪನೆ ಕುರಿತು ಆಯೋಜಿಸಿದ್ದ ತಾಲೂಕು ಮಟ್ಟದ ಪ್ರವರ್ತಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸೌಹಾರ್ದ ಸಹಕಾರ ತನ್ನ 25ನೇ ವರ್ಷದ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಮೂಲತಃ ನಾವೆಲ್ಲರೂ ಸಹಕಾರಿಗಳೇ ಆಗಿದ್ದೇವೆ. ಸಹಕಾರಿಗಳಿಂದ ಅಸಾಧ್ಯವಾದುದೇನೂ ಇಲ್ಲವೆನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. 12 ಗಂಟೆಯೊಳಗೆ ಬಳಕೆಯಾಗದಿದ್ದರೆ ಹಾಳಾಗುವ ಹಾಲು ಇಂದು ಮನೆ ಮನೆಗೆ ಶುದ್ಧವಾಗಿ ತಲುಪುತ್ತಿದೆ ಎಂದರೆ ಅದಕ್ಕೆ ಸಹಕಾರಿಗಳ ಶ್ರಮವೇ ಕಾರಣ ಎಂದರು.
ಗಗನವೇ ಗಡಿ: ಸಹಕಾರಿಗಳ ಸಾಧನೆಗೆ ಗಗನವೇ ಗಡಿಯಾಗಿದೆ. ಸೌಹಾರ್ದ ಸಹಕಾರ ಸಂಘ ಸ್ಥಾಪಕರು ಸರ್ಕಾರದಿಂದ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ವೈಯಕ್ತಿಕ ಲಾಭದ ಮನೋಭಾವದಿಂದ ದೂರವಿರಬೇಕು. ಇದೊಂದು ಸಾಮುದಾಯಕ ಸೇವೆ ಎನ್ನುವುದನ್ನು ಅರಿಯಬೇಕು. ಹಳೆಯ ಮೈಸೂರು ಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಅಂದರೆ ಜನರು ಬಡ್ಡಿ, ಚಕ್ರಬಡ್ಡಿ ಶೋಷಣೆಗೆ ಒಳಗಾಗಿದ್ದಾರೆ ಎಂದರ್ಥ. ನಿಮ್ಮ ಹಣ ನಿಮ್ಮ ಸುತ್ತಲೇ ಸುತ್ತುತ್ತಿರಬೇಕು, ನೀವು ಬೆಳೆದ ಬೆಳೆ, ತಯಾರಿಸಿದ ಉತ್ಪನ್ನ ನಿಮ್ಮವರಿಂದಲೇ ಬಳಕೆಯಾಗಬೇಕೆಂದರೆ ಸೌಹಾರ್ದ ಸಹಕಾರ ಸಂಘಗಳ ಸ್ಥಾಪನೆಗೆ ಮುಂದಾಗಿರಿ ಎಂದು ಸಲಹೆ ನೀಡಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಅನಸೂಯಾ ಮಾತನಾಡಿ, ಸೌಹಾರ್ದ ಸಂಘಗಳು ಸ್ವಯಂ ಆರ್ಥಿಕ ಶಕ್ತಿಯಿಂದ ಮುಂದೆ ಬರಬೇಕು. ಸರ್ಕಾರದ ಯಾವುದೇ ಆರ್ಥಿಕ ಬೆಂಬಲ ಸಿಗಲಾರದು. ನಿಮ್ಮದೇ ಆದ ಬೈಲಾ ಸಿದ್ಧಪಡಿಸಿಕೊಳ್ಳಿ. ಅದೇ ನಿಮ್ಮ ಸಂವಿಧಾನವಾಗಬೇಕು. ಸ್ಥಳೀಯ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರಿ ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಮಾತನಾಡಿ, ಬಾಂಗ್ಲಾದೇಶದ ನಾಯಕ ಯೂನೂಸ್ ತನ್ನ ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸುವ ಮೂಲಕ ಆರ್ಥಿಕ ಸಬಲತೆಯನ್ನು ತಂದ ಕಾರಣ ಆತನಿಗೆ ನೊಬೆಲ್ ಪಾರಿತೋಷಕ ದೊರಕಿತು. ಗ್ರೀನ್ ಬೆಲ್ಟ್ ಚಳವಳಿ ಮೂಲಕ ನೊಬೆಲ್ ಶಾಂತಿ ಪ್ರಶಸ್ತಿ ಗಳಿಸಿದ ಆಫ್ರಿಕಾದ ಕೀನ್ಯಾ ದೇಶದ ಆದಿವಾಸಿ ಮಹಿಳೆ ವಂಗಾರಿ ಮಾಥೈ ಒಬ್ಬ ಸಹಕಾರಿ ಎನ್ನುವುದನ್ನು ನಾವು ಅರಿಯಬೇಕು. ಸಹಕಾರ ನೀತಿಯಿಂದ ಸಮಾಜದ ಸಕಾರಾತ್ಮಕ ಬದಲಾವಣೆ ಸಾಧ್ಯವೆನ್ನುವುದನ್ನು ಮನಗಾಣಬೇಕು ಎಂದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಬಿರ್ಸಾ ಮುಂಡಾ ಸೌಹಾರ್ದ ಸಹಕಾರ ಸಂಘ ಚಟುವಟಿಕೆಯನ್ನು ಆರಂಭಿಸಿದ್ದು, ದೇವರಾಜ ಅರಸು ಸೌಹಾರ್ದ ಸಹಕಾರಿ ಸಂಘ ಸ್ಥಾಪನೆಯ ಪ್ರಕ್ರಿಯೆ ಮುಂದುವರಿದಿದೆ. ರೈತ ಸಂಘಟನೆಗಳು ಸೇರಿದಂತೆ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ತಮ್ಮ ಆರ್ಥಿಕಾಭಿವೃದ್ಧಿಗೆ ಸೌಹಾರ್ದ ಸಹಕಾರ ಸಂಘಗಳ ಸ್ಥಾಪನೆಗೆ ಮುಂದಾಗಬೇಕೆಂದರು.
ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿದರು. ಸಭೆಯಲ್ಲಿ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ, ಮರಡೇಶಮೂರ್ತಿ, ಮರದೂರು ಶ್ರೀಕಂಠು, ನಗರಸಭಾ ಸದಸ್ಯ ದೇವರಾಜ್, ಸೂರೇಗೌಡ, ರೈತ ಮುಂಖಡ ಧನಂಜಯ, ನಾಗಣ್ಣ ದೇವಾಡಿಗ, ವಿಠಲ್ ನಾಣಾಚ್ಚಿ, ಮಾಕೋಡು ರವಿ, ಅರುಣ್, ಚಂದ್ರೇಗೌಡ, ಜೀವಿಕಾ, ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಾಗರಿಕರು ಭಾಗವಹಿಸಿದ್ದರು.
735 ಕೋಟಿ ರೂ. ಲಾಭ: ಸೌಹಾರ್ದ ಅಭಿವೃದ್ಧಿ ಅಧಿಕಾರಿ ಆರ್.ಎಸ್.ಸುರೇಶ್ ಮಾತನಾಡಿ, ರಾಜ್ಯದಲ್ಲಿ 75 ಲಕ್ಷ ಸೌಹಾರ್ದ ಸಹಕಾರಿ ಸದಸ್ಯರನ್ನು ಹೊಂದಿರುವ ಸಂಘಗಳು 2025ರ ಮಾರ್ಚಿ ಅಂತ್ಯದವರೆಗೆ ನಿವ್ವಳ 735 ಕೋಟಿ ರೂ. ಲಾಭ ಗಳಿಸಿದೆ. 44 ಸಾವಿರ ಕೋಟಿ ರೂ. ಠೇವಣಿ ಹೊಂದಿದ್ದು, 35 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಸಾಲ ನೀಡಿದೆ. 75 ಸಾವಿರ ಮಂದಿ ಉದ್ಯೋಗ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.