ದೋರನಹಳ್ಳಿ: ಸದಾ ಪುಸ್ತಕ ಓದುವುದೇ ಶಿಕ್ಷಣವಲ್ಲ. ಪುಸ್ತಕದ ಜ್ಞಾನವನ್ನು ಮಸ್ತಕದೊಳಗೆ ಇಳಿಸುವುದರ ಜತೆಗೆ ಪಠ್ಯೇತರ ಚಟುವಟಿಕೆ ಬಗ್ಗೆ ಅರಿಯುವುದೇ ನಿಜವಾದ ಶಿಕ್ಷಣ ಎಂದು ಆಂಗ್ಲ ಶಿಕ್ಷಕಿ ಸವಿತಾ ಹೇಳಿದರು.
ಗ್ರಾಮದ ಡಿಡಿಯು ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ದೀಪ ಹಚ್ಚಿದ ಮೇಲೆ ಕತ್ತಲು ಹೋದಂತೆ ವಿದ್ಯಾರ್ಥಿಗಳು ತಮ್ಮ ಓದಿನ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ಶಿಕ್ಷಣದಿಂದ ಬದುಕಿನ ಕತ್ತಲೆ ಹೋಗುತ್ತದೆ. ಒಂದು ಉತ್ತಮ ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮಾನ. ಆದ್ದರಿಂದ ವಿದ್ಯಾರ್ಥಿಗಳು ಅಂತಹ ಪುಸ್ತಕಗಳನ್ನು ಓದಬೇಕು ಎಂದು ಕಿವಿಮಾತು ಹೇಳಿದರು.
ಡಿಡಿಯು ಸಂಸ್ಥೆ ಸಂಸ್ಥಾಪಕ ಡಾ.ಭೀಮಣ್ಣ ಮೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿತ್ತು. ಆದರೆ ಅಡಿಗರು ಅದನ್ನು ಗುರುವಿನ ಸಮಾನನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹೇಳಿದ್ದಾರೆ. ಅದರರ್ಥ ಶಿಷ್ಯ ಅಥವಾ ವಿದ್ಯಾರ್ಥಿ ತನಗೆ ಕಲಿಸಿದ ಗುರುವಿನ ಸಮಾನ ಇಲ್ಲವೆ ಅವರಿಗಿಂತ ಹೆಚ್ಚಿನ ಸ್ಥಾನಮಾನ, ಹುದ್ದೆಗೆ ಏರಿದಾಗ ಮಾತ್ರ ಗುರು-ಶಿಷ್ಯ ಇಬ್ಬರಿಗೂ ಮುಕ್ತಿ. ಹೀಗಾಗಿ ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ಓದಿಗೆ ಮೀಸಲಿಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಹೇಳಿದರು.
ರಸಾಯನಶಾಸ್ತ್ರ ಉಪನ್ಯಾಸಕ ಸುರೇಶ ಅರುಣಿ, ಸಿಎಚ್‌ಸಿ ವೈದ್ಯೆ ಡಾ.ಗೀತಾ ಪಾಟೀಲ್ ಮಾತನಾಡಿದರು. ಉಪನ್ಯಾಸಕರಾದ ಜಗದೇವಪ್ಪ, ಶರಣಬಸವ, ಪ್ರಭುಲಿಂಗಯ್ಯ, ಪವನಕುಮಾರ, ನಿರ್ಮಲಾ, ಪ್ರತಿಭಾ, ಕವಿತಾ, ಪ್ರೇಮಲತಾ, ಮಲ್ಲಿಕಾರ್ಜುನ, ಹೇಮಾವತಿ ಇತರರಿದ್ದರು.
ಚೈತ್ರಾ ಪಾಟೀಲ್ ನಿರೂಪಣೆ ಮಾಡಿದರು. ಶಾರದಾ ಪ್ರಾರ್ಥಿಸಿದರು. ಸ್ವೇಹಾ ಪಾಟೀಲ್ ಸ್ವಾಗತಿಸಿದರು. ಅಭಿಷೇಕ ವಂದಿಸಿದರು. ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪೆನ್ನು ನೀಡಿ ಸ್ವಾಗತಿಸಲಾಯಿತು.