ಜಿಲ್ಲೆ

ಸ್ವಯಂ ಪ್ರೇರಿತ ರಕ್ತ ದಾನಿಗಳಿಗೆ ಸನ್ಮಾನ

ಬಾಗಲಕೋಟೆ: ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಿಲ್ಲೆಯ 5 ಜನರ ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದಿಂದ ಸನ್ಮಾನಿಸಲಾಯಿತು.

ಶುಕ್ರವಾರ ನಗರದ ಕಾಲೇಜ್ ಆಪ್ ನರ್ಸಿಂಗ್ ಕಾಲೇಜಿನಲ್ಲಿ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಸ್ವಯಂ ಪ್ರೇರಿತ ರಕ್ತ ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸಲ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ಗಣೇಶ ಪತಂಗೆ, ಮುತ್ತುರಾಜ ಹಲಗಲಿ, ವೀರುಪಾಕ್ಷಪ್ಪ ಪೂಜಾರ, ದೇವೆಂದ್ರ ಗವರಿ ಹಾಗೂ ಬಾಗಲಕೋಟೆಯ ಕಿದ್ಮತ್-ಇ ಇನ್ಸಾನಿಯತ ಪೌಂಡೇಶನ ಪ್ರತಿನಿಧಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಏಡ್ಸ್ ಪ್ರತಿಬಂದಕ ಹಾಗೂ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಸುವರ್ಣ ಕುಲಕರ್ಣಿ ಅವರು ವಿಶ್ವ ರಕ್ತದಾನಿಗಳ ದಿನಾಚರಣೆಯ ಇತಿಹಾಸ ಮತ್ತು ರಕ್ತ ಮತ್ತು ರಕ್ತದ ಅಂಗಾಶಗಳ ಕುರಿತು ಹಾಗೂ ರಕ್ತದ ಅವಶ್ಯಕತೆಯ ಪ್ರಸ್ತುತ ಸ್ಥಿತಿಗತಿ, ಈ ವರ್ಷದ ಘೋಷ ವಾಖ್ಯ; 20 ವರ್ಷಗಳ ರಕ್ತದಾನದ ಸಂಬ್ರಮ ಧನ್ಯವಾದ ರಕ್ತದಾನಿಗಳೆ ನಿಮ್ಮ ಜೀವದಾನದ ಕೊಡುಗೆ ಅತ್ಯಮೂಲ್ಯವಾದದು ಎಂದು ತಿಳಿಸಿದರು. ರಕ್ತದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವ ಕಾರ್ಯಕ್ರಮ ಇದಾಗಿದ್ದು, ಯುವಕ ಮತ್ತು ಯುವತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕೆಂದು ತಿಳಿಸಿದರು.

ಅಧ್ಯಕ್ಷ ಸ್ಥಾನ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಯು.ಎನ್.ದಂಧರಗಿ ರಕ್ತದಾನ ಮಾಡಿ ಮಾತನಾಡಿ ಅವರು ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪತ್ತಿ ಯಾಗುವುದಿಲ್ಲ. ಮನುಷ್ಯನ ದೇಹದಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಆದ್ದರಿಂದ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡಲು ಯಾವುದೇ ರೀತಿಯಲ್ಲಿ ಭಯ ಬೇಡ ಎಂದರು.

ಡಾ.ಸುರೇಶಗೌಡ ಪಾಟೀಲ ರಕ್ತದಾನ ಮಾಡುವ ಮೂಲಕ ನಂತರ ಮಾತನಾಡಿ ಇಲ್ಲಿಯವರೆಗೆ ಯಾರು ರಕ್ತದಾನ ಮಾಡಿಲ್ಲವೋ ಅವರು ರಕ್ತದಾನ ಮಾಡಲು ಮುಂದಾಗಿ. ಅದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವದಲ್ಲದೇ ಇದರಿಂದ ಆರೋಗ್ಯ ಕೂಡಾ ಸುಧಾರಿಸುತ್ತದೆ ಎಂದು ತಿಳಿಸಿದರು. ಪ್ರಾರಂಭದಲ್ಲಿ ಕಾಲೇಜ ಆಪ್ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಡಾ.ಸುನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಶೈಲ ಹಟ್ಟಿ ಮಾತನಾಡಿ ವಿಶ್ವ ಸ್ವಯಂ ಪ್ರೇರಿತ ರಕ್ತ ದಾನಿಗಳ ದಿನಾಚರಣೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡುವುದರ ಮೂಲಕ ಮಾನವೀಯತೆ ಮೆರೆದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಶಿಕಲಾ ಸಿನ್ನೂರ, ಮಹಾವಿದ್ಯಾಲಯದ ಪ್ರಾಧ್ಯಾಪಕ, ಸಿಬ್ಬಂದ್ದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾಗವಹಿಸಿದ್ದರು.