ಚಿಕ್ಕಬಳ್ಳಾಪುರ : ವ್ಯಾಪಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದ ಶಿಬಿರಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸಲಹೆ ನೀಡಿದರು.
ನಗರದ ನ್ಯೂ ಹೊರೈಜಾನ್ ಶಾಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ರೆಡ್‌ಕ್ರಾಸ್ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡಿ, ಮಾತನಾಡಿದರು. ಜಿಲ್ಲೆಯ ಸಂಘ ಸಂಸ್ಥೆಗಳು ವಿಶೇಷ ಕಾರ್ಯಕ್ರಮ ಮತ್ತು ದಿನಾಚರಣೆಗಳಿಗೆ ರಕ್ತದಾನ ಶಿಬಿರ ಕೈಗೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ಇದರಿಂದ ಆಸ್ಪತ್ರೆಗಳಲ್ಲಿ ಅನೇಕ ಮಂದಿ ಶಸಚಿಕಿತ್ಸೆ ವೇಳೆ ಸಕಾಲಕ್ಕೆ ರಕ್ತ ಸಿಗದೆ ತೊಂದರೆ ಅನುಭವಿಸುವುದು ತಪ್ಪ್ಪುತ್ತದೆ. ರೋಗಿಗಳ ಜೀವವೂ ಉಳಿಯುತ್ತದೆ ಎಂದರು.
ವೈದ್ಯ ಕೆ.ಪಿ.ನರಸಿಂಹಮೂರ್ತಿ ಮಾತನಾಡಿ, ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಹೃದಯಾಘಾತ, ರಕ್ತದೊತ್ತಡ ಸೇರಿ ಹಲವು ಕಾಯಿಲೆಗಳು ದೂರವಾಗುತ್ತವೆ. ಇದರ ಬಗ್ಗೆ ಇತರರಲ್ಲೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವಿ ಮಾತನಾಡಿ, ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯು ಜನರ ಬೇಡಿಕೆಗೆ ಅನುಗುಣವಾಗಿ ರಕ್ತ ಪೂರೈಸುತ್ತಿದೆ. ಹಲವರ ಸಹಕಾರದೊಂದಿಗೆ ಶಿಬಿರಗಳನ್ನು ನಡೆಸಿ ರಕ್ತ ಸಂಗ್ರಹಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬರು ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು. ನಗರಸಭಾ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ ಪ್ರಶಾಂತ್ ಮತ್ತಿತರರು ಇದ್ದರು.