ಬಾಗಲಕೋಟೆ: ಮುದ್ರಾ ಯೋಜನೆಯಡಿ ಕೇವಲ ಬ್ಯಾಂಕಿನಲ್ಲಿ ವ್ಯವಹಾರ ಮಾಡುವವರಿಗೆ ಮಾತ್ರ ಸಾಲ ನೀಡದೇ ಹೊಸದಾಗಿ ಉದ್ಯೋಗ ಕೈಗೊಳ್ಳುವವರಿಗೆ ಸಾಲ ಒದಗಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ದಿಶಾ ೨ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪದವೀಧರ ಹಾಗೂ ಕೌಶಲ ತರಬೇತಿ ಹೊಂದಿದವರಿಗೆ ಉದ್ಯೋಗ ಕೈಗೊಳ್ಳಲು ಮುದ್ರಾ ಯೋಜನೆ ಜಾರಿಗೆ ತಂದಿದ್ದು, ಬ್ಯಾಂಕಿನ ವ್ಯವಸ್ಥಾಪಕರು ತಮ್ಮ ಬ್ಯಾಂಕಿನಲ್ಲಿ ನಿರಂತರವಾಗಿ ವ್ಯವಹರಿಸುವವರನ್ನು ಬಿಟ್ಟು ಹೊಸದಾಗಿ ಉದ್ಯೋಗ ಕೈಗೊಳ್ಳುವ ಯುವಕ, ಯುವತಿಯರಿಗೆ ಸಾಲ ಒದಗಿಸುವ ಕಾರ್ಯವಾಗಬೇಕು ಎಂದರು.
ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಡಿ ಕೌಶಲ ಅಭಿವೃದ್ಧಿ ಇಲಾಖೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ಒದಗಿಸಿದಾಗ ಮಾತ್ರ ನಿರುದ್ಯೋಗ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ ಎಂದರು.
ರಾಷ್ಟ್ರೀಯ ಹೆದ್ದಾರಿ ೨೧೮ ಸೀಮಿಕೇರಿ ಗ್ರಾಮದಲ್ಲಿಯ ಕೊಳಚೆ ಹೊರಗಡೆ ಹೋಗಲು ನಿರ್ಮಿಸಲಾದ ಸಿಡಿ (ಚಿಕ್ಕ ಸೇತುವೆ) ಕಾರ್ಯ ಅಪೂರ್ಣಗೊಂಡಿದ್ದರಿಂದ ಅದರಿಂದ ಕೊಳಚೆ ನೀರು ರಸ್ತೆಯ ಮೇಲೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಅವಘಡಗಳು ಸಹ ಸಂಭವಿಸಿದ್ದು, ಕೂಡಲೇ ಅಪೂರ್ಣಗೊಂಡ ಸಿಡಿಯನ್ನು ಪೂರ್ಣಗೊಳಿಸು ಕೊಳಚೆ ನೀರು ಸಮರ್ಪಕವಾಗಿ ಹೋಗುವಂತೆ ಅಧಿಕಾರಿಗಳು ಕ್ರಮವಹಿಸಲು ಸೂಚಿಸಿದರು.
ನಮ್ಮ ಹೊಲ ನಮ್ಮ ರಸ್ತೆಯಡಿ ಪ್ರತಿ ಮತಕ್ಷೇತ್ರಕ್ಕೆ ೩೭ ಕಿ.ಮೀ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ನೀಡಿದ್ದು, ನಕಾಶೆಯಲ್ಲಿ ಬರುವ ರಸ್ತೆಗಳ ನಕ್ಷೆ ತೆಗೆದುಕೊಂಡು ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಬಯೋ ಗ್ಯಾಸ್ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಮೀಣ ವಸತಿ ಯೋಜನೆಯಡಿ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದು, ಸರಿಯಾಗಿ ಕಂತಿನ ಹಣ ಜಮೆಯಾಗುತ್ತಿಲ್ಲ. ಈ ಬಗ್ಗೆ ಚರ್ಚಿಸುವುದಾಗಿ ಸಂಸದರು ತಿಳಿಸಿದರು.
ಸಭೆಯಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಜಿ.ಪಂ ಸಿಇಒ ಟಿ.ಭೂಬಾಲನ್, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ, ನಾಮನಿರ್ದೇಶಿತ ಸದಸ್ಯರಾದ ಗಣೇಶ ಕಗಳಿ, ವಿಜಯ ತೇರದಾಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.