ಹಾನಗಲ್ಲ: ಸ್ವಪಕ್ಷೀಯರೇ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿದ ಪರಿಣಾಮ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ ಹಾಗೂ ಉಪಾಧ್ಯಕ್ಷೆ ಸರಳಾ ಜಾಧವ ತಮ್ಮ ಸ್ಥಾನದಿಂದ ಅವಧಿ ಪೂರ್ವದಲ್ಲೇ ನಿರ್ಗಮಿಸಿದ ಅಪರೂಪದ ಪ್ರಸಂಗ ಶುಕ್ರವಾರ ನಡೆಯಿತು.
ಅವಿಶ್ವಾಸ ನಿರ್ಣಯಕ್ಕಾಗಿ ನ. 3ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ನ. 23ರಂದು ಜಿಲ್ಲಾಧಿಕಾರಿ ತಾಲೂಕು ಪಂಚಾಯಿತಿ ಸದಸ್ಯರಿಗೆ ಪತ್ರ ರವಾನಿಸಿ ಡಿ. 4ರಂದು ಅವಿಶ್ವಾಸ ನಿರ್ಣಯ ಸಭೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಶುಕ್ರವಾರ ತಾಪಂ ಸಭಾಭವನದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಅವಿಶ್ವಾಸ ನಿರ್ಣಯದ ಮಂಡನೆಯಲ್ಲಿ ಕಾಂಗ್ರೆಸ್ನ 20 ಸದಸ್ಯರು ಪಾಲ್ಗೊಂಡಿದ್ದರು. ಇವರಲ್ಲಿ 19 ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ನಿರ್ಣಯ ಗೆಲುವು ಕಂಡಿತು. ಬಿಜೆಪಿಯ ಮೂವರು ತಾಪಂ ಸದಸ್ಯರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ.
ನಾನು ಕಟ್ಟಾ ಕಾಂಗ್ರೆಸ್ಸಿಗನಾಗಿದ್ದು, ನನ್ನ ಅವಧಿ ಪೂರ್ಣಗೊಳ್ಳುವ ಮುನ್ನವೇ ನಮ್ಮವರೇ ಅವಿಶ್ವಾಸ ಮಾಡಿದ್ದು ವಿಷಾದದ ಸಂಗತಿ. ನನಗೆ ಬಣ ರಾಜಕಾರಣ ಗೊತ್ತಿಲ್ಲ. ನಾನು ಮಾಜಿ ಸಚಿವ ಮನೊಹರ ತಹಶೀಲ್ದಾರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಅವರ ಜೊತೆಗೆ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿರುವುದೇ ಅವಿಶ್ವಾಸ ಮಂಡನೆಗೆ ಪ್ರಮುಖ ಕಾರಣವಾಗಿದೆ. ಅಧಿಕಾರಕ್ಕೆ ಆಸೆ ಪಡದೇ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಬೆಳವಣಿಗೆ ಪಕ್ಷದಲ್ಲಿ ಹಲವು ಬದಲಾವಣೆಗೆ ಕಾರಣವಾಗಲಿದೆ. | ಸಿದ್ದಪ್ಪ ಹಿರಗಪ್ಪನವರ ತಾಪಂ ನಿರ್ಗಮಿತ ಅಧ್ಯಕ್ಷ