ಜಿಲ್ಲೆ

ಸ್ವದೇಶಿ ಖಾದಿ ವ್ಯಾಪಾರಕ್ಕೆ ಪ್ರಿತಂ ಜೆ. ಗೌಡ ಚಾಲನೆ

ಹಾಸನ: ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ನಗರದ ಹೇಮಾವತಿ ಪ್ರತಿಮೆ ಬಳಿ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದಿಂದ ತೆರೆಯಲಾಗಿರುವ ಖಾದಿ ಮಹೋತ್ಸವ ಮಾರಾಟ ಮಳಿಗೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹಾಗೂ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಖಾದಿ ಬಟ್ಟೆ ವ್ಯಾಪಾರ ಮಾಡುವ ಮೂಲಕ ಉದ್ಘಾಟಿಸಿದರು.
ಈ ಪ್ರೀತಂ ಜೆ. ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ವಿಶೇಷ ದಿನದ ಅಂಗವಾಗಿ ನರೇಂದ್ರ ಮೋದಿ ಅವರು ಕರೆ ಕೊಟ್ಟಂತೆ ಗುಡಿ ಕೈಗಾರಿಕೆ ಮತ್ತು ಸ್ಥಳೀಯವಾಗಿ ನಡೆಯುವ ಎಲ್ಲಾ ಕೈಗಾರಿಕೆಗೆ ಉತ್ತೇಜನ ಕೊಡಬೇಕೆಂದು ಹಾಸನದ ಪ್ರಮುಖ ರಸ್ತೆಯಲ್ಲಿ ಖಾದಿ ಬಂಡಾರದ ಮಳಿಗೆ ತೆರೆಯಲಾಗಿದೆ. ಜಿಲ್ಲೆಯ ಜನತೆ ಹೆಚ್ಚು ಖಾದಿ ಬಳಸುವ ಮೂಲಕ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ಕೊಡುವಂತೆ ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಅಂಗವಾಗಿ ಈಗಾಗಲೇ ಸ್ವಚ್ಛತಾ ಅಭಿಯಾನವನ್ನು ಜಿಲ್ಲಾದ್ಯಾಂತ ಮಾಡಲಾಗಿದೆ. ಸ್ಥಳೀಯವಾಗಿರುವ ದೇವಾಲಯಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛ ಮಾಡಲಾಗಿದೆ. ಎಲ್ಲೆಲ್ಲಿ ಗಾಂಧಿ ಪ್ರತಿಮೆಗಳಿವೆ ಅಲ್ಲಿ ಮಲಾರ್ಪಣೆ ಮಾಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಖಾದಿ ಮಳಿಗೆಗೆ ಆಗಮಿಸಿ ಖಾದಿ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಸ್ವದೇಶಿ ಮತ್ತು ನಮ್ಮ ದೇಶದ ಎಲ್ಲ ನಾಗರಿಕರಿಗೆ ಪ್ರೇರಣೆ ಆಗಲಿ ಎಂದು ಈ ಮಳಿಗೆಗೆ ಚಾಲನೆ ಕೊಡಲಾಗಿದೆ. ನಾಗರಿಕರೆಲ್ಲಾ ಇಲ್ಲಿಗೆ ಬಂದು ಸ್ವದೇಶಿ ವಸ್ತುಗಳ ಖರೀದಿಸಿ ಉತ್ತೇಜನ ಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರಾಧ್ಯಕ್ಷ ಮಂಜು, ಮುಖಂಡರಾದ ಶೋಭನ್ ಬಾಬು, ಜಿಲ್ಲಾ ಸಂಚಾಲಕ ಚೇತನ್, ಗುರುಪ್ರಸಾದ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ನೇತ್ರಾ ಮಂಜುನಾಥ್, ಮಾಜಿ ಅಧ್ಯಕ್ಷೆ ರತ್ನಾ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಅಂಬಿಕಾ, ಪ್ರೇಮಕುಮಾರ್ ಇತರರು ಉಪಸ್ಥಿತರಿದ್ದರು.