ಹಾಸನ: ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ರಾಷ್ಟ್ರ ರಕ್ಷಣಾ ಸೇನೆ ಅಧ್ಯಕ್ಷ ಸುರೇಶ್ ಗೌಡ ತಿಳಿಸಿದರು.
ಹುಟ್ಟು ಹೋರಾಟಗಾರರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಉಪೇಂದ್ರ ಇವರನ್ನು ಆದರ್ಶವಾಗಿಟ್ಟುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ. ಕೆಲವು ರಾಜಕೀಯ ನಾಯಕರ ಸಿದ್ಧಾಂತದ ಅಡಿಯಲ್ಲಿ ಆದರ್ಶ ಸಂಸದ ಎಂಬ ಘೋಷವಾಕ್ಯದಡಿ ಪ್ರಾಮಾಣಿಕವಾಗಿ ಮನೆ ಮನೆ ತಲುಪಿ ಮತದಾರರನ್ನು ನೇರವಾಗಿ ಭೇಟಿಯಾಗಿ, ಯಾವುದೇ ಆಮಿಷ ಒಡ್ಡದೆ ಭ್ರಷ್ಟಾಚಾರರಹಿತವಾಗಿ, ಕಾನೂನಾತ್ಮಕವಾಗಿ, ಸಾಂವಿಧಾನಿಕವಾಗಿ ಚುನಾವಣೆ ಎದುರಿಸುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಿನ ರಾಜಕೀಯ ಹೋರಾಟದಲ್ಲಿ ಹಣ ಬಲ, ಜಾತಿ ಬಲ, ಜನ ಬಲ, ಕುತಂತ್ರದ ಮೂಲಕ ಮತದಾರರಿಗೆ ಅಮಿಷಗಳನ್ನು ಒಡ್ಡಿ ಆಯ್ಕೆ ಆಗುತ್ತಾ ಬರುವುದು ಸಾಮಾನ್ಯವಾಗಿದೆ. ಆದರೆ, ಅಂಬೇಡ್ಕರ್ ಅವರ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿ ಜನಪ್ರತಿನಿಧಿ ಆಗಬೇಕೆಂಬ ಕನಸು ಬಹಳಷ್ಟು ಜನರಲ್ಲಿದೆ. ಆದರೆ ಈ ವ್ಯವಸ್ಥೆಯ ಅಬ್ಬರಕ್ಕೆ ಹೆದರಿ ಎಲ್ಲರೂ ಹಿಂಜರಿಯುತ್ತಿದ್ದಾರೆ. ಆದರೆ, ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದು ಜಿಲ್ಲೆಯ ಜನ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.