ಅರಸೀಕೆರೆ: ದೇಶವನ್ನು ಕಾಡುತ್ತಿರುವ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಆಂತರಿಕ ಕಚ್ಚಾಟ, ಸ್ವಾರ್ಥವನ್ನು ಹತ್ತಿಕ್ಕದಿದ್ದರೆ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಹೊಯ್ಸಳೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಬಸವಂತಪ್ಪ ಅಭಿಪ್ರಾಯಪಟ್ಟರು.
ನಗರದ ಹೊಯ್ಸಳೇಶ್ವರ ಪದವಿ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಹಾನ್ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಾಡು ಬಂಧಮುಕ್ತವಾಗಿದೆ. ಸಂವಿಧಾನದ ಆಶಯದಂತೆ ನಡೆಯಬೇಕಿದ್ದ ನಾಯಕರೇ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ನೈತಿಕ, ಸಾಂವಿಧಾನಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳವ ಪ್ರವೃತ್ತಿ ದೂರಮಾಡಬೇಕು. ಭ್ರಷ್ಟಾಚಾರ, ಸುಲಿಗೆಯಂತಹ ವಿದ್ಯಮಾನಗಳು ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು, ಅದರ ನಿರ್ಮೂಲನೆಗೆ ಜನತೆ ಪಣತೊಡಬೇಕು ಎಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಎನ್.ಬಿ.ರೇವಣ್ಣ, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.