ಚಿತ್ರದುರ್ಗ: ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲೂ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನವನ್ನು ಅ. 2ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ಜನ್ಮದಿನದ ಸ್ಮರಣಾರ್ಥ ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರ ಧ್ಯೇಯವಾಕ್ಯ ಸ್ವಚ್ಛತೆಯೇ ದೈವತ್ವ ಎಂಬ ಕನಸು ನನಸಾಗಿಸಲು ಕೇಂದ್ರ ಜಲಶಕ್ತಿ ಮಂತ್ರಾಲಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ತ್ಯಾಜ್ಯಮುಕ್ತ ಭಾರತ ಎಂಬ ಘೋಷವಾಕ್ಯದೊಂದಿಗೆ ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸುಂದರ ಪರಿಸರ, ಸದೃಢ ಗ್ರಾಮಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಹೆಚ್ಚು ಜನಸಂದಣಿ ಸ್ಥಳಗಳಾದ ಬಸ್, ರೈಲ್ವೆ ನಿಲ್ದಾಣ, ಕೆರೆ, ಹಳ್ಳಿ, ನದಿ ತೀರ, ಸಾಂಸ್ಥಿಕ, ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿಗಳು, ನಾಲಾಗಳು ಸೇರಿ ವಿವಿಧ ಸ್ಥಳಗಳಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ, ಜನಜಾಗೃತಿ, ಶ್ರಮದಾನ ಸೇರಿ ಹಲವು ಚಟುವಟಿಕೆ ನಡೆಯಲಿವೆ. ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲಾ ಗ್ರಾಪಂಗಳು, ಎನ್‌ಜಿಒ, ಎಸ್‌ಎಚ್‌ಜಿ, ನೆಹರು ಯುವ ಕೇಂದ್ರ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಒಕ್ಕೂಟ, ಯುವ ಸಂಘಟನೆ, ಎನ್‌ಸಿಸಿ, ಎನ್‌ಎಸ್‌ಎಸ್, ಪಿಡಿಒಗಳು, ಸಿಬ್ಬಂದಿ, ಗ್ರಾಮಸ್ಥರು, ಆಶಾ-ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ಜನಾಂದೋಲನ ಹಮ್ಮಿಕೊಳ್ಳಲು ಸೂಚಿಸಿದ್ದಾರೆ.