ಜಿಲ್ಲೆ

ಸ್ವಚ್ಛತೆಯಿಂದ ಸುಂದರ ನಗರ ನಿರ್ಮಾಣ ಸಾಧ್ಯ

ಚಿತ್ರದುರ್ಗ: ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಜಿಲ್ಲೆಯ ಹಲವೆಡೆ ನಿತ್ಯವೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಕೋಟೆ ಆವರಣದಲ್ಲಿ ಮಂಗಳವಾರ ನಗರಸಭೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ಜನರಲ್ಲಿ ಶುಚಿತ್ವದೆಡೆ ಅರಿವು ಮೂಡಿಸಲು ಸೆ. 14ರಿಂದ ಆರಂಭವಾಗಿರುವ ಅಭಿಯಾನ ಅಕ್ಟೋಬರ್ 1ರವರೆಗೆ ನಡೆಯಲಿದೆ. ಅಭಿಯಾನ ಒಂದೆರೆಡು ದಿನಗಳಿಗೆ ಸೀಮಿತವಾಗಬಾರದು. ಸ್ವಚ್ಛತೆಯಿಂದ ಸುಂದರ ನಗರ ನಿರ್ಮಾಣ ಹಾಗೂ ಉತ್ತಮ ಪರಿಸರ, ಆರೋಗ್ಯ ರಕ್ಷಣೆ ಸಾಧ್ಯ ಎಂದರು.
ಕೋಟೆಯಲ್ಲಿ ಸ್ವಚ್ಛತಾ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿತ್ತು. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಸಾಹಸಿ ಜ್ಯೋತಿರಾಜ್ ಇದ್ದರು.