ಚನ್ನರಾಯಪಟ್ಟಣ: ಸೊಳ್ಳೆಗಳಿಂದ ಮಲೇರಿಯಾ, ಡೆಂೆ, ಚಿಕೂನ್‌ಗುನ್ಯಾ, ಮೆದುಳು ಜ್ವರ ಮುಂತಾದ ಹಲವಾರು ಕಾಯಿಲೆಗಳು ಹರಡುತ್ತಿದ್ದು, ಸೊಳ್ಳೆ ನಿಯಂತ್ರಣ ಮಾಡಿದಲ್ಲಿ ಮಾತ್ರ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಸೊಳ್ಳೆ ಸಂತಾನೋತ್ಪತ್ತಿ ತಾಣದ ಬಗ್ಗೆ ಜಾಗೃತಿ ವಹಿಸಿ ಸೊಳ್ಳೆ ನಿರ್ಮೂಲನೆ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಎ.ಎನ್.ಕಿಶೋರ್‌ಕುಮಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮಲೇರಿಯಾ ಮಾಸಾಚರಣೆ ಪ್ರಯುಕ್ತ ಸೊಳ್ಳೆಗಳ ನಿಯಂತ್ರಣ ವಿಧಾನಗಳ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಮಲೇರಿಯಾ ರೋಗವನ್ನು ಸಂಪೂರ್ಣ ನಿಯಂತ್ರಿಸುವಲ್ಲಿ 2025ರೊಳಗೆ ಮಲೇರಿಯಾ ನಿರ್ಮೂಲನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಸಾರ್ವಜನಿಕರು ಜಾಗೃತರಾಗಿ ಯಾವುದೇ ರೀತಿಯ ಜ್ವರದ ಲಕ್ಷಣಗಳು ಕಾಣಿಸಿಕೊಂಡಾಗ ಅಸಡ್ಡೆ ತೋರದೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಮನೆಯಲ್ಲಿ ಮತ್ತು ಮನೆ ಸುತ್ತಮುತ್ತ ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೊಳ್ಳೆಗಳ ಸಂತತಿ ಕಡಿಮೆ ಮಾಡಲು ಪರಿಸರದಲ್ಲಿ ಹಾಗೂ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಬಿ.ಆರ್.ರಮೇಶ್ ಮಾತನಾಡಿ, ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಬರುವುದು ಎಲ್ಲರ ಜವಾಬ್ದಾರಿಯಾಗಿದೆ. ಸ್ವಚ್ಛತೆ ಇಲ್ಲದೆ ಹೋದಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಮಾರಕ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಾಗಾಗಿ ಎಚ್ಚರದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಸೊಳ್ಳೆಗಳ ಜೀವನ ಕ್ರಮ, ಸೊಳ್ಳೆಗಳನ್ನು ನಿಯಂತ್ರಣ ಮಾಡಲು ಅನುಸರಿಸಬೇಕಾದ ಕ್ರಮಗಳ ಮಾದರಿಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಅನಿತಾ, ಪುಷ್ಪಾವತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎನ್. ಶಿವಲಿಂಗಯ್ಯ, ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.