ಜಿಲ್ಲೆ

ಸ್ವಚ್ಛತೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ

Bidar

ಬೀದರ್: ಸ್ವಚ್ಛತೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿ ಎಸ್.ಸಿ. ಮಹೇಶ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಸ್ವಚ್ಛ ಭಾರತ ಮಿಷನ್ ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ ಆಂದೋಲನದ ಪ್ರಯುಕ್ತ ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆಯಿಂದಲೇ ಅನೇಕ ರೋಗಗಳು ದೂರವಾಗುತ್ತವೆ. ಕಾರಣ ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು. ಮನೆ, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಸ್ವಚ್ಛತೆ ಅರಿವು ಮೂಡಿಸಲು ಸೆ. 15 ರಿಂದ ಅಕ್ಟೋಬರ್ 2 ರ ವರೆಗೆ ಸ್ವಚ್ಛತೆಯೇ ಸೇವೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಸೃಷ್ಟಿಸುವುದು ಆಂದೋಲನದ ಗುರಿಯಾಗಿದೆ ಎಂದು ಹೇಳಿದರು.
ಅಭಿಯಾನದಲ್ಲಿ ಸಾರ್ವಜನಿಕರಲ್ಲಿ ವೈಯಕ್ತಿಕ ಸ್ವಚ್ಛತೆ, ಓಣಿ, ಗ್ರಾಮ, ಪಟ್ಟಣ, ನಗರ ಸ್ವಚ್ಛತೆ, ಕಸ ಸಂಗ್ರಹ, ಹಸಿ ಕಸ, ಒಣ ಕಸ ಬೇರ್ಪಡಿಸುವಿಕೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ, ಜಲ ಮೂಲ ಸ್ಥಳಗಳಲ್ಲಿ ಸಸಿ ನೆಡುವಿಕೆ ಸೇರಿದಂತೆ ವಿವಿಧ ವಿಷಯಗಳ ಜಾಗೃತಿ ಮೂಡಿಸಲಾಗುತ್ತಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರು ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಹೀನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವನ್ನೂ ಮೂಡಿಸುತ್ತಿರುವುದು ಶ್ಲಾಘನೀಯ. ಕಾಲೇಜು ವಿದ್ಯಾರ್ಥಿಗಳು ಸ್ವಂತ ಹಣದಲ್ಲಿ ಸ್ವಚ್ಛತಾ ಕಿಟ್ ಖರೀದಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದು ಮಾದರಿಯಾಗಿದೆ ಎಂದರು.
ಶಾಹೀನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಾಮಾಜಿಕ ಹೊಣೆಗಾರಿಕೆ ಜ್ಞಾನವನ್ನೂ ಕೊಡಲಾಗುತ್ತಿದೆ. ಅದರ ಫಲವಾಗಿ ವಿದ್ಯಾರ್ಥಿಗಳು ಸ್ವಚ್ಛತೆ ಅಭಿಯಾನ, ಆರೋಗ್ಯ, ಪರಿಸರ, ಮಾದಕ ವಸ್ತುಗಳ ಪುಷ್ಪರಿಣಾಮ ಜಾಗೃತಿ ಮೊದಲಾದ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.
ಸ್ವಚ್ಛತೆಯೇ ದೊಡ್ಡ ಸಮಾಜ ಸೇವೆಯಾಗಿದೆ. ಸಾರ್ವಜನಿಕರು ಸ್ವಚ್ಛತೆ ಕಾಪಾಡುವ ಮೂಲಕ ಸ್ವಚ್ಛ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ತುಕಾರಾಮ ತ್ಯಾಗಿ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ಗುರುಪ್ರಸಾದ ಪಾಟೀಲ ಇದ್ದರು.

20 ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನ: ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರ (ಸೆ. 25) 20 ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು. 700 ವಿದ್ಯಾರ್ಥಿಗಳು ಪಾಲಕರು ಜೇಬು ಖರ್ಚಿಗೆ ಕೊಟ್ಟ ಹಣದಲ್ಲಿ ಖರೀದಿಸಿದ ಕಿಟ್‍ಗಳೊಂದಿಗೆ ಗ್ರಾಮಗಳಿಗೆ ತೆರಳಿ, ಮಂದಿರ, ಮಸೀದಿ, ಚರ್ಚ್, ಆಸ್ಪತ್ರೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಲಿದ್ದಾರೆ. ಅಭಿಯಾನದ ನಂತರ ಸ್ವಚ್ಛತಾ ಕಿಟ್‍ಗಳನ್ನು ಆಯಾ ಪ್ರಾರ್ಥನಾ ಮಂದಿರ, ಆಸ್ಪತ್ರೆ, ಶಾಲೆಯವರಿಗೆ ಒಪ್ಪಿಸಲಿದ್ದಾರೆ ಎಂದು ಹೇಳಿದರು.