ಬೀರೂರು ಪುರಸಭೆಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪುರಸಭಾಧ್ಯಕ್ಷೆ ವನಿತಾಮಧು ಬಾವಿಮನೆ, ಎನ್.ಎಂ.ನಾಗರಾಜ್, ಲಕ್ಷ್ಮಣ್, ಜಿ.ಪ್ರಕಾಶ್, ಎಂ.ಪಿ.ಸುದರ್ಶನ್ ಇತರರಿದ್ದರು.  
ಜಿಲ್ಲೆ

ಸ್ವಚ್ಛತೆಯಷ್ಟೇ ಆರೋಗ್ಯಕ್ಕೂ ಗಮನಹರಿಸಿ

ಬೀರೂರು: ಪಟ್ಟಣದ ಸೌಂದರ್ಯ ರಕ್ಷಣೆಯ ರಾಯಭಾರಿಗಳಾದ ಪೌರಕಾರ್ಮಿಕರು ಸಾರ್ವಜನಿಕ ಸ್ಥಳ ಸ್ವಚ್ಛತೆಗೆ ನೀಡುವಷ್ಟೇ ಕಾಳಜಿಯನ್ನು ವೈಯಕ್ತಿಕ ಆರೋಗ್ಯ ರಕ್ಷಣೆಗೂ ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.

ಪೌರಕಾರ್ಮಿಕರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಸ್ಥಳೀಯ ಆಡಳಿತಗಳ ಘನತ್ಯಾಜ್ಯ ನಿರ್ವಹಣೆ ನಿರ್ಧಾರಗಳಿಗೆ ದನಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೀರಿ. ಪೌರಕಾರ್ಮಿಕರು ಯಾವುದೇ ದುಶ್ಚಟಗಳಿಗೆ ದಾಸರಾಗದೆ ನಿಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಸ್ಯೆಗಳನ್ನು ಸದಸ್ಯರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಹಲವು ಕಾರಣಗಳಿಂದ ಪೌರಕಾರ್ಮಿಕ ದಿನ ತಡವಾಗಿ ಆಚರಿಸಲಾಗುತ್ತಿದೆ. ವೇತನ ನಿಧಿ ಮೂಲಕ ವೇತನ ಬಿಡುಗಡೆಯಾಗುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗ ಕೈಗೊಂಡ ನಿರ್ಧಾರವನ್ನು ಪೌರನೌಕರರು ಸದಾ ಸ್ಮರಿಸುತ್ತಾರೆ ಎಂದರು.

ಪೌರಕಾರ್ಮಿಕರ ಬೇಡಿಕೆಗಳ ಮನವಿಯನ್ನು ಪುರಸಭೆಗೆ ಸಲ್ಲಿಸಿದರು. ನಿವೃತ್ತ ಪೌರಕಾರ್ಮಿಕ ಹಾಗೂ ಸಿಬ್ಬಂದಿ, ಪೌರಕಾರ್ಮಿಕರು, ನೀರುಗಂಟಿಗಳು, ವಾಹನ ಚಾಲಕರು, ಹೊರಗುತ್ತಿಗೆದಾರರು, ಪೌರಸೇವಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪಟ್ಟಣ ಸಾರ್ವಜನಿಕ ಆಸ್ಪತ್ರೆ ಡಾ. ಕಿಶೋರ್, ಆರೋಗ್ಯ ಇಲಾಖೆಯ ಮಧು, ಪುರಸಭಾ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯ ಬಿ,ಕೆ.ಶಶಿಧರ್, ಎಂ.ಪಿ.ಸುದರ್ಶನ್, ಬಿ.ಆರ್.ಮೋಹನ್‌ಕುಮಾರ್, ರಾಜು, ಸಹನಾ, ಭಾಗ್ಯಲಕ್ಷ್ಮೀ, ಜ್ಯೋತಿ, ಶಾರದಾ, ನಂದಿನಿ, ಲೋಕೇಶಪ್ಪ, ಮಾಣಿಕ್‌ಪಾಷಾ, ಮಲ್ಲೇಶ್, ಲಕ್ಷ್ಮಣ್ ಇತರರಿದ್ದರು.