ಹಾಸನ : ಮಹಾತ್ಮ ಗಾಂಧೀಜಿ ಅವರನ್ನು ಅವರ ಜನ್ಮದಿನದಂದು ಮಾತ್ರ ನೆನೆಯದೇ ವರ್ಷಪೂರ್ತಿ ನೆನೆದು ಅವರ ಆದರ್ಶವನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಗಾಂಧಿ ಜಯಂತಿಗೆ ಅರ್ಥ ಬರುತ್ತದೆ ಎಂದು ಶಾಸಕ ಎಚ್.ಪಿ. ಸ್ವರೂಪ್ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು. ಮೊದಲು ಮನೆಯ ಅಂಗಳದ ಸ್ವಚ್ಛ ಮಾಡಿ ಬೇರೊಬ್ಬರಿಗೆ ಪ್ರೇರಣೆಯಾಗಬೇಕು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಕಸ ತೊಟ್ಟಿ ಹಾಗೂ ಕಸ ವಿಲೇವಾರಿ ವಾಹನಕ್ಕೆ ಹಾಕಬೇಕು ಎಂದು ಮನವಿ ಮಾಡಿದರು.
ಸ್ವಚ್ಛತೆಗೆ ಮೊದಲ ಆದ್ಯತೆ ಕೊಟ್ಟಾಗಲೇ ಗಾಂಧಿ ಜಯಂತಿಗೆ ಅರ್ಥ ಬರುತ್ತದೆ. ಗಾಂಧಿ ಜಯಂತಿ ದಿನ ಮಾತ್ರ ಗಾಂಧೀಜಿಯನ್ನು ಸ್ಮರಿಸಿದರೆ ಸಾಲದು. ವರ್ಷಪೂರ್ತಿ ಅವರ ಜೀವನ ಆದರ್ಶವನ್ನು ಪಾಲಿಸುವ ಗುಣ ಬೆಳೆಸಿಕೊಳ್ಳಬೇಕೆಂದರು. ಹಾಗೆ ಹಿರಿಯ ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ ಅವರ ಮನವಿ ಮೇರೆಗೆ ಹಾಸನದಲ್ಲಿ ಗಾಂಧಿ ಭವನ ನಿರ್ಮಾಣವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವುಗಳು ನಡೆದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ. ಈ ದೇಶದ ಇತಿಹಾಸಕ್ಕೆ ಇಡೀ ಜೀವನವನ್ನೇ ಮುಡಿಪಾಗಿಟ್ಟು ನಮಗೆ ಸ್ವತಂತ್ರ ತಂದು ಕೊಡುವಲ್ಲಿ ಮಹಾತ್ಮ ಗಾಂಧೀಜಿ ಅವರ ತ್ಯಾಗ ಬಹು ದೊಡ್ಡದು. ಬೇರೆ ದೇಶಗಳಲ್ಲಿ ಗಾಂಧೀಯವರ ಸಾಧನೆಯನ್ನು ಸ್ಮರಣೆ ಮಾಡುತ್ತಾರೆ ಎಂದರು.
ಅನ್ಯ ರಾಷ್ಟ್ರಗಳು ದಾಳಿ ಮಾಡಿದರೂ ಕೂಡ ಭಾರತ ತನ್ನದೆಯಾದ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಯಾವ ತೊಂದರೆ ಆಗದ ರೀತಿಯಲ್ಲಿ ಮುನ್ನಡೆಯುತ್ತಾ ಬಂದಿದೆ. ಭಾರತ ದೇಶದಲ್ಲಿ ಎಲ್ಲಾ ಸಂಸ್ಕತಿಗಳು ಇವೆ. ಗುರು-ಹಿರಿಯರಿಂದ ಮಾರ್ಗದರ್ಶನ ಪಡೆದು ನಾವೂ ನಮ್ಮ ದೇಶವನ್ನು ಧರ್ಮದ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ ಎಂದು ಹೇಳಿದರು.
ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ ಮಾತನಾಡಿ, ಗಾಂಧೀಜಿ ಅವರು ನನ್ನ ಜೀವನವೇ ಎಲ್ಲರಿಗೂ ಸಂದೇಶ ಎಂದು ಹೇಳಿದ್ದರು. ಅವರ ಜೀವನ ಚರಿತ್ರೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಂಡರೇ ದೇಶದಲ್ಲಿ ಶಾಂತಿಯನ್ನು ತರಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಹಾಗೂ ಬೌದ್ಧ ಧರ್ಮದ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರವಚನ ನೀಡಿದರು.
ಬಹುಮಾನ ವಿತರಣೆ
ಗಾಂಧಿ ಜಯಂತಿ ಹಿನ್ನಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ, ಪದವಿಪೂರ್ವ, ಪದವಿ-ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೂರು ವಿಭಾಗಗಳಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಗಮನ ಸೆಳೆದ ಗಾಂಧಿ ವೇಷಧಾರಿಗಳು
ಪುಟಾಣಿ ಮಕ್ಕಳು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ವೇಷಧಾರಿಗಳಾಗಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು. ಮೆಚ್ಚುಗೆ ಪಡೆದ ವೇಷದಾರಿಗಳಿಗೆ ಬಹುಮಾನ ನೀಡಲಾಯಿತು. ಜತೆಗೆ ನಗರದ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಗಾಂಧಿ ಜೀವನ ಕುರಿತ ಕಿರು ನಾಟಕ ಪ್ರದರ್ಶನ ಮಾಡಿದರು.
ಗಾಂಧಿ ಜಯಂತಿ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೆ ಜಿಲ್ಲಾ ನ್ಯಾಯಾಲಯ ನೌಕರ ನಾಗೇಶ್ ಅವರು ಸಂಗ್ರಹಿಸಿರುವ ವಿವಿಧ ಮಾದರಿಯ ಅಂಚೆ ಚೀಟಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ.ಎಲ್ ಮುದ್ದೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಸದಸ್ಯ ಚಂದ್ರೇಗೌಡ, ಪ್ರಾಂಶುಪಾಲರಾದ ಇರ್ಷಾದ್ ಪಾಷ, ನವೀನ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
---
ಫೋಟೋ ಶೀರ್ಷಿಕೆ
02 ಎಚ್‌ಎಸ್‌ಎನ್ 02
ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಎಚ್.ಎಂ. ಶಿವಣ್ಣ, ಎಚ್.ಪಿ. ಸ್ವರೂಪ್, ಸಿ. ಸತ್ಯಭಾಮಾ, ಕೆ.ಟಿ. ಶಾಂತಲಾ ಇತರರು ಇದ್ದರು.
02 ಎಚ್‌ಎಸ್‌ಎನ್ 02ಎ
ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಪುಟಾಣಿಗಳು ಗಾಂಧೀಜಿ ವೇಷ ಧರಿಸಿ ಬಂದಿದ್ದರು. ಈ ವೇಳೆ ಶಾಸಕ ಎಚ್.ಪಿ. ಸ್ವರೂಪ್, ಎಚ್.ಎಂ. ಶಿವಣ್ಣ, ಶ್ರೀ ಶಂಭುನಾಥ ಸ್ವಾಮೀಜಿ, ಜಿ.ಎಲ್ ಮುದ್ದೇಗೌಡ, ಸಿ. ಸತ್ಯಭಾಮಾ, ಮೊಹಮ್ಮದ್ ಸುಜಿತಾ, ಕೆ.ಟಿ.ಶಾಂತಲಾ, ಬಿ.ಎ.ಜಗದೀಶ್, ಚಂದ್ರಶೇಖರ್, ಈ. ಕೃಷ್ಣೇಗೌಡ ಇತರರು ಇದ್ದರು.