ಚಿತ್ರದುರ್ಗ: ನೋಡಿ ಸ್ವಚ್ಛತೆ ಇದ್ದಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ. ಇದು ಹೇಳಿ ಕೇಳಿ ರೋಗಿಗಳನ್ನು ಗುಣಪಡಿಸಿ ಮನೆಗೆ ಹಿಂದಿರುಗಿಸುವ ಆಲಯ. ಇಂತಹ ಪವಿತ್ರ ಸ್ಥಳದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಹೇಗೆ…
ಜಿಲ್ಲಾಸ್ಪತ್ರೆಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆಗೆ ಮುಂದಾದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪರಿ ಇದು. ನಂತರ ಸಾರ್ವಜನಿಕರು ಕೂಡ ಗಲೀಜು ಮಾಡದಂತೆ ಮನವರಿಕೆ ಮಾಡಿದರು.
ಹೆರಿಗೆ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸುವ ವೇಳೆ ಹಾಸಿಗೆ ಸೌಲಭ್ಯಗಳೇಕೆ ಕಡಿಮೆ ಇವೆ. ಹೊರಗಡೆ ಕೂಡ ರೋಗಿಗಳು ಮಲಗಿದ್ದಾರಲ್ಲ. ಇದು ಸರಿಯೇ? ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚು. ಹಾಗೆಂದ ಮಾತ್ರಕ್ಕೆ ನೆಲದ ಮೇಲೆ ಚಾಪೆ, ತಡೆ ಹಾಸಿಕೊಂಡು ಮಲಗುವಂತಾಗಬಾರದು. ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆ ಆವರಣದಲ್ಲೇ ತಾಯಿ ಮತ್ತು ಮಕ್ಕಳ ನೂತನ ಆಸ್ಪತ್ರೆಯನ್ನು ಹೆಚ್ಚುವರಿ ಹಾಸಿಗೆ ಸೌಲಭ್ಯದೊಂದಿಗೆ ಆಧುನಿಕವಾಗಿ ನಿರ್ಮಿಸಲಾಗುತ್ತಿದ್ದು, ಅದು ಪೂರ್ಣಗೊಂಡು, ಉದ್ಘಾಟನೆ ಆಗುವವರೆಗೂ ಈ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ ಎಂದು ಸ್ಥಳದಲ್ಲಿದ್ದ ವೈದ್ಯರು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.
ರಕ್ತ ಪರೀಕ್ಷೆ, ಔಷಧಿಗೆ ಹೊರಗೆ ಬರೆದುಕೊಡುವ ಪರಿಪಾಠ ಮುಂದುವರೆದಿದೆ ಎಂಬ ಕುರಿತು ದೂರುಗಳು ಕೇಳಿಬರುತ್ತಿವೆ. ಜಿಲ್ಲಾಸ್ಪತ್ರೆಯಲ್ಲೇ ಈ ಸೌಲಭ್ಯಗಳಿದ್ದರೂ ಹೀಗೇಕೆ ಮಾಡುತ್ತಿದ್ದೀರಿ. ಇದನ್ನು ಸರಿಪಡಿಸಿಕೊಳ್ಳದಿದ್ದರೆ, ಸಮಸ್ಯೆಗೆ ಸಿಲುಕುವಿರಿ. ಇನ್ನು ಮುಂದೆ ಹೊರಗೆ ಬರೆದುಕೊಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದರು.
ಜನನ ಪ್ರಮಾಣಪತ್ರ ನೋಂದಣಿ ವಿಭಾಗಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ಖರೀದಿ, ಖರ್ಚು, ವೆಚ್ಚ ಪ್ರತಿಯೊಂದರ ಮಾಹಿತಿ ಸರಿಯಾಗಿ ಇರಬೇಕು. ಈ ಕುರಿತು ಲೆಕ್ಕಪತ್ರ ವಿಭಾಗ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಔಷಧ ವಿಭಾಗವೂ ಇದಕ್ಕೆ ಹೊರತಾಗಿಲ್ಲ. ಪ್ರತಿ ವಿಭಾಗವೂ ಪಾರದರ್ಶಕ ಮಾಹಿತಿ ದಾಖಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎರಡ್ಮೂರು ತಾಸು ಜಿಲ್ಲಾಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ, ವೈದ್ಯಕೀಯ ಸೌಲಭ್ಯ ಬಳಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ. ವೃದ್ಧರು, ಮಕ್ಕಳು, ಮಹಿಳೆಯರು ಸೇರಿ ಪ್ರತಿ ರೋಗಿಯ ಕುರಿತು ಕಾಳಜಿವಹಿಸಿ. ಯಾವುದೇ ದೂರು ಬಾರದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು. ರೋಗಿಗಳೊಂದಿಗೂ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ್, ಡಾ.ಬಸವರಾಜ್, ಡಾ.ದೇವರಾಜ್ ಸೇರಿ ಇತರರಿದ್ದರು.