ಚಿತ್ರದುರ್ಗ: ನಾಲ್ಕು ದಿಕ್ಕುಗಳಿಂದಲೂ ಹರಿದು ಬಂದ ಜನಸಾಗರ. ಇದರಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕ. ಅರ್ಧ ತಾಸಿನೊಳಗೆ ಇಡೀ ವೃತ್ತ ಭರ್ತಿಯಾಗಿ ಕಾಲಿಡಲಿಕ್ಕೂ ಜಾಗವಿಲ್ಲದಂತ ಪರಿಸ್ಥಿತಿ. ದಾರಿಹೋಕರು ನಿಬ್ಬೆರಗಾದ ಕ್ಷಣ…
ಜನರಲ್ಲಿ ಶುದ್ಧ ಕುಡಿಯುವ ನೀರು, ವೈಯಕ್ತಿಕ ಸ್ವಚ್ಛತೆ, ಪರಿಸರ ನೈರ್ಮಲ್ಯ ಕುರಿತು ಜಿಲ್ಲಾಡಳಿತ, ಜಿಪಂನಿಂದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಚಾಲನೆ ಪಡೆದ ಬೃಹತ್ ಜನಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಕಂಡ ದೃಶ್ಯವಿದು.
*ಮೊಳಗಿದ ಜಾಗೃತಿ ಘೋಷಣೆ: ‘ಕುದಿಸಿ, ಆರಿಸಿದ ನೀರನ್ನೇ ಬಳಸಿ’, ‘ಮಲ-ಮೂತ್ರ ವಿಸರ್ಜನೆಗೆ ತಪ್ಪದೆ ಶೌಚಗೃಹ ಬಳಸಿ’, ‘ಮನೆಯಲ್ಲಿನ ನೀರಿನ ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿ’, ‘ಕುಡಿಯಲು ಶುದ್ಧ ನೀರು, ಸೇವಿಸುವ ಆಹಾರ ಶುದ್ಧವಾಗಿರಲಿ’, ‘ತಿಂಡಿ-ಊಟಕ್ಕೂ ಮುನ್ನ ಹಾಗೂ ಶೌಚ ಬಳಸಿದ ನಂತರ ಕೈಗಳನ್ನು ಸ್ವಚ್ಛವಾಗಿ ಸಾಬೂನಿನಿಂದ ತೊಳೆಯಿರಿ’, ಎಂಬಿತ್ಯಾದಿ ಜಾಗೃತಿ ಮೂಡಿಸುವ ಫಲಕಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕೈಗಳಲ್ಲಿ ರಾರಾಜಿಸಿದವು. 35 ವಾರ್ಡ್‌ಗಳಲ್ಲೂ ಪ್ರಭಾತ್ ಫೇರಿ ಮೂಲಕ ಸ್ವಚ್ಛತಾ ಜಾಗೃತಿಯ ಘೋಷಣೆ ಮೊಳಗಿಸಿದರು.
*ಅರಿವಿನ ಹಬ್ಬದ ವಾತಾವರಣ: ಹಳದಿ ಸೀರೆಯುಟ್ಟ ನೂರಾರು ಮಹಿಳೆಯರು ಕುಂಭದೊಂದಿಗೆ ಕಂಗೊಳಿಸಿದರು. ಕೈತೊಳೆಯುವ ಪ್ರಾತ್ಯಕ್ಷಿಕೆ ಕೂಡ ಗಮನ ಸೆಳೆಯಿತು. ವೀರಗಾಸೆ, ಪಟ ಕುಣಿತ, ಬೊಂಬೆ ಕುಣಿತ, ಗಾಯನ, ಹಲಗೆ ವಾದನ, ಬೀದಿ ನಾಟಕ ಸೇರಿ ಅನೇಕ ಕಲಾತಂಡಗಳು ನಗರದ ವಿವಿಧೆಡೆ ಮಿಂಚಿನ ಸಂಚಲನ ನಡೆಸಿ, ಅರಿವು ಮೂಡಿಸಲು ಯತ್ನಿಸಿದವು.
ಜಾಗೃತಿ ಸಂದೇಶ ಸಾರುವ ಭಿತ್ತಿ ಪತ್ರಗಳ ಪ್ರದರ್ಶನ, ಎಲ್ಇಡಿ ವಾಹನದಲ್ಲಿ ವಿಡಿಯೋ ಚಿತ್ರ ಪ್ರದರ್ಶನ, ಗ್ರಾಪಂಗಳಲ್ಲಿ ಆಂದೋಲನ, ಕರಪತ್ರಗಳ ಹಂಚಿಕೆ, ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಅರಿವು, ಪಂಜಿನ ಮೆರವಣಿಗೆ ಒಳಗೊಂಡು ಹತ್ತಾರು ಬಗೆಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು.
ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ವಿವಿಧ ಇಲಾಖೆ ನೌಕರರು ಪಾಲ್ಗೊಂಡಿದ್ದರು. ಒಟ್ಟಾರೆ ಹಲವರನ್ನೊಳಗೊಂಡ ಬೃಹತ್ ಜಾಗೃತಿ ಜಾಥಾ ಕೂಡ ಅರಿವಿನ ಹಬ್ಬದ ವಾತಾವರಣ ಸೃಷ್ಟಿಸಿತ್ತು.
ಜಿಪಂ ಸಿಇಒ ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಎಸ್‌ಪಿ ಕೆ.ಪರಶುರಾಮ್, ಎಸಿ ಎಂ.ಕಾರ್ತಿಕ್, ತಹಸೀಲ್ದಾರ್ ನಾಗವೇಣಿ, ಡಿಎಚ್‌ಒ ಡಾ.ಆರ್.ರಂಗನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಬಿಇಒ ನಾಗಭೂಷಣ್, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಇತರರಿದ್ದರು.
*ಕೋಟ್
ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಪ್ತಾಹ ಆಯೋಜಿಸಿದ್ದು, ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಉತ್ತಮ ಆರೋಗ್ಯಕ್ಕಾಗಿ ನಮ್ಮೂರಿನ ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾಧಿಕಾರಿ
ಸ್ವಚ್ಛತೆ ನಮ್ಮೆಲ್ಲರ ಆದ್ಯತೆಯಾಗಲಿ
ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಸದೃಢವಾಗಿರುತ್ತದೆ. ಹೀಗಾಗಿ ಸ್ವಚ್ಛತೆಯೊಂದಿಗೆ ಸುಂದರ ವಾತಾವರಣ ನಿರ್ಮಿಸುವುದೇ ನಮ್ಮೆಲ್ಲರ ಆದ್ಯತೆಯಾಗಲಿ ಎಂದು ಸಚಿವ ಡಿ.ಸುಧಾಕರ್ ಸಲಹೆ ನೀಡಿದರು. ಕವಾಡಿಗರಹಟ್ಟಿಯಲ್ಲಿ ಸಂಭವಿಸಿದ ಅಹಿತಕರ ಘಟನೆ ಇಡೀ ರಾಜ್ಯದಲ್ಲೇ ಗಂಭೀರ ಪ್ರಕರಣವಾಗಿದೆ. ಜಿಲ್ಲೆಯ ಎಲ್ಲ ವರ್ಗದ ಜನರು ಆರೋಗ್ಯದಿಂದ ಇರಬೇಕು. ಹೀಗಾಗಿ ಇದೊಂದು ವಿಶೇಷ ಸಪ್ತಾಹವಾಗಿದ್ದು, ಮುಂದೆಂದೂ ಮರುಕಳಿಸದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜನಪ್ರತಿನಿಧಿಗಳು, ಅಧಿಕಾರಿಗಳದ್ದಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯ ಎಂದು ಮನವಿ ಮಾಡಿದರು.
ಮಹಿಳೆಯರಿಗೆ ಕಿಟ್ ವಿತರಣೆ.
ಚಿತ್ರದುರ್ಗ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಕವಾಡಿಗರಹಟ್ಟಿಯ ದಲಿತ ಕಾಲನಿಯ 425 ಮಹಿಳೆಯರಿಗೆ ಫುಡ್‌ಕಿಟ್ ವಿತರಿಸಲಾಯಿತು. ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ನಾಗರಾಜ್ ಸಂಗಂ, ರೂಪಾ ಜನಾರ್ಧನ್, ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ತಾಲೂಕು ಯೋಜನಾಧಿಕಾರಿ ಬಿ.ಅಶೋಕ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಧಾ ಇತರರಿದ್ದರು.
ಆಹಾರ ಧಾನ್ಯದ ಕಿಟ್
ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಗಳಿಗೆ ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ಸೋಮವಾರ ಆಹಾರ ಧಾನ್ಯದ ಕಿಟ್, ಸಹಾಯಧನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿಗಳಾದ ರೇವಣಸಿದ್ದಪ್ಪ, ರಾಘವೇಂದ್ರ, ತಾಲೂಕು ಗೌರವಾಧ್ಯಕ್ಷ ಕೆ.ವೀರಣ್ಣ, ಅಧ್ಯಕ್ಷ ಬಿ.ಎಚ್. ಶಿವಪ್ರಕಾಶ್, ಪದಾಧಿಕಾರಿಗಳಾದ ಶ್ರೀನಿವಾಸ್‌ಮೂರ್ತಿ, ತಿಪ್ಪೇಸ್ವಾಮಿ, ರಾಮಣ್ಣ, ಲೋಲಾಕ್ಷಮ್ಮ, ಎ.ಮಲ್ಲಿಕಾರ್ಜುನ್, ನಾಗರಾಜ್, ಬಸವರಾಜ್, ಸಿದ್ದೇಶ್, ಗುರುನಾಥ್, ಹನುಮಂತಪ್ಪ, ಕರಿಯಪ್ಪ, ಮಲ್ಲಿಕಾರ್ಜುನಸ್ವಾಮಿ ಇದ್ದರು.
===