ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಕೋಟ್ಯಂತರ ಜನರು ಮನೆಯಲ್ಲಿದ್ದರೆ, ಸ್ವಚ್ಛತೆ ಕಾಪಾಡಬೇಕಾದ ಪೌರಕಾರ್ವಿುಕರು ಕರ್ತವ್ಯನಿರ್ವಹಿಸಲೇಬೇಕಿದೆ. ಎಲ್ಲಿ ತಮಗೂ ಕರೊನಾ ಸೋಂಕು ತಗುಲೀತೋ ಎಂಬ ಭೀತಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಜತೆಗೆ, ಇವರಿಗೆ ಸುರಕ್ಷತಾ ಸಾಮಗ್ರಿ ಕೊರತೆಯೂ ಇದೆ. ಬೆಂಗಳೂರಿನಲ್ಲಿ ಸುಮಾರು 1.20 ಕೋಟಿ ಜನರು ವಾಸವಿದ್ದು, ಪ್ರತಿನಿತ್ಯ ಸುಮಾರು 5 ಸಾವಿರ ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತದೆ. ಈಗ ಉದ್ಯಮಗಳು ಸ್ಥಗಿತವಾಗಿದ್ದು ಒಟ್ಟಾರೆ ಕಸ ಉತ್ಪಾದನೆ ಇಳಿಕೆಯಾಗಿದೆ. ಆದರೆ ಮನೆಯಿಂದ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ ತುಸು ಹೆಚ್ಚಾಗಿದೆ. ಬೆಂಗಳೂರಿನಲ್ಲಿ 17 ಸಾವಿರ ಪೌರ ಕಾರ್ವಿುಕರಿದ್ದಾರೆ. ಕೆಲವರು ವಿಜಯವಾಣಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಧಿಕ ಹೊಣೆ
ಕರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ತಡೆಯಲು ಸ್ವಚ್ಛತೆಯೇ ಪ್ರಮುಖ ಅಸ್ತ್ರವಾಗಿದೆ. ಲಾಕ್ಡೌನ್ನಿಂದ ವಾಹನ ಸಮಸ್ಯೆಯಾರೂ ಪೌರಕಾರ್ವಿುಕರು ನಿತ್ಯ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಸಾಮಾನ್ಯ ದಿನಕ್ಕಿಂತ ಹೆಚ್ಚುವರಿ ಅವಧಿ ಕೆಲಸ ಮಾಡುತ್ತಿದ್ದಾರೆ. ಮನೆಗಳಿಗೆ ಸೀಮಿತವಾಗಿದ್ದ ಅವರು ಈಗ ಮಾರುಕಟ್ಟೆಗಳು, ಮೈದಾನಗಳು, ಕಟ್ಟಡಗಳು, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣಗಳ ಬಳಿ ಹೆಚ್ಚುವರಿ ಸ್ವಚ್ಛತಾ ಕೆಲಸ ಮಾಡುವುದು ಅನಿವಾರ್ಯವಾಗಿದೆ.
ಶಂಕಿತರ ಮನೆಯಿಂದಲೂ ಕಸ ಸಂಗ್ರಹ
ಮಾ.8ರ ನಂತರ ವಿದೇಶದಿಂದ ಸುಮಾರು 22 ಸಾವಿರ ಜನರು ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಅವರ ಪ್ರಥಮ ಸಂಪರ್ಕ ಹೊಂದಿದ 13 ಸಾವಿರ ಜನರನ್ನೂ ಈಗ ಕ್ವಾರಂಟೈನ್ ಮಾಡಲಾಗಿದ್ದು, ಒಟ್ಟು 35 ಸಾವಿರ ಜನರು ಕರೊನಾ ಸೋಂಕು ಶಂಕಿತರಾಗಿದ್ದಾರೆ. ಜತೆಗೆ 40ಕ್ಕೂ ಹೆಚ್ಚು ಜನರು ಸೋಂಕಿತರಿದ್ದಾರೆ. ಪೌರಕಾರ್ವಿುಕರು ಈ ಎಲ್ಲ ಮನೆಗಳ ಕಸ ಸಂಗ್ರಹಣೆ ಮಾಡುತ್ತಿದ್ದಾರೆ.
ಭಯ ಇದೆ, ಆದ್ರೆ ಕೆಲಸ ಬಿಡೋಕಾಗಲ್ಲ
‘ನಮಗೆ ಬಿಬಿಎಂಪಿ ಮಾಸ್ಕ್, ಗ್ಲೌಸ್, ಬೂಟು, ಸ್ಯಾನಿಟೈಸರ್ ಬಾಟ್ಲಿ ಕೊಟ್ಟಿದೆ. ಅದನ್ನು ಕೆಲಸ ಮಾಡೋವಾಗ ಹಾಕ್ಕೋಬೇಕು ಅಂತ ಹೇಳಿದಾರೆ. ಆದ್ರೆ ಮಾಸ್ಕ್ ಕೊಟ್ಟು 15 ದಿನ ಆಗಿದ್ದು, ಅದನ್ನೇ 3 ದಿನಕ್ಕೆ ಒಮ್ಮೆ ಒಗೆದು ಹಾಕಬೇಕು. ದೂರ ನಿಂತ್ಕೊಂಡು ಕಸ ಹಾಕಿಸಿಕೊಳ್ತೀವಿ. ಆದ್ರೆ ಯಾರ ಮನೇಲಿ ಯಾರಿಗೆ ಕರೊನಾ ಇದೆ ಅಂತ ಗೊತ್ತಿಲ್ಲ. ಅವರು ಕಸ ತರ್ತಾರೆ ನಾವು ಇಸ್ಕೊತಿವಿ. ನಮಗೂ ಕರೊನಾ ಬರಬಹುದು ಅನ್ನೋ ಭಯ ಇದೆ. ಆದ್ರೆ ಕೆಲಸ ಬಿಟ್ಟು ಮನೇಲಿರೋಕಾಗಲ್ಲ’ ಎಂದು ಪೌರಕಾರ್ವಿುಕ ಮಹಿಳೆ ವರಲಕ್ಷ್ಮಿ ಹೇಳುತ್ತಾರೆ.