ಜಿಲ್ಲೆ

ಸ್ವಚ್ಛತೆ ಕಾಪಾಡಲು ಆಗದಷ್ಟು ಬಡತನ ಆಡಳಿತಕ್ಕಿಲ್ಲ

ಚಿಕ್ಕಬಳ್ಳಾಪುರ: ಎಪಿಎಂಸಿ ಯಾರ್ಡ್‌ನಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾದ ಅನೈರ್ಮಲ್ಯ ವಾತಾವರಣವನ್ನು ನೋಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬೇಸರ ವ್ಯಕ್ತಪಡಿಸಿದರು.

ನಗರದ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ವಿವಿಧೆಡೆ ತೆರಳಿ, ಉತ್ಪನ್ನಗಳ ಸಾಗಾಟ, ವಹಿವಾಟು ನಿರ್ವಹಣೆ, ತ್ಯಾಜ್ಯ ವಿಲೇವಾರಿ ಸೇರಿ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಸರ್ಕಾರದ ಅಧೀನದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕುಗಳು, ತೊಟ್ಟಿಗಳು ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆಗದಷ್ಟು ಬಡತನ ಆಡಳಿತ ವ್ಯವಸ್ಥೆಯಲ್ಲಿ ಇಲ್ಲ. ಮೊದಲು ನಿಯಮಿತವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಮಾರುಕಟ್ಟೆಯ ಆವರಣದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕ್‌ನ ಸುತ್ತಮುತ್ತ ನೀರು ನಿಂತು ಸೊಳ್ಳೆ ಹಾಗೂ ಲಾರ್ವಾ ಉತ್ಪತ್ಪಿಯಾಗುತ್ತಿದೆ. ಇದರ ಅರಿವಿದ್ದರೂ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ ಏಕೆ, ಏನು ಸಮಸ್ಯೆ ಇದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಗುತ್ತಿಗೆದಾರನಿಗೆ ತರಾಟೆ

ದಿನನಿತ್ಯ ಮಾರುಕಟ್ಟೆಗೆ ಸಾವಿರಾರು ರೈತರು ಬಂದು ಹೋಗುತ್ತಾರೆ. ನೂರಾರು ವ್ಯಾಪಾರಿಗಳು, ಕಾರ್ಮಿಕರು ಕೆಲಸ ವಾಡುತ್ತಾರೆ. ಇಂತಹ ಜನಸಂದಣಿ ಪ್ರದೇಶಗಳನ್ನೇ ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಡೆಂಘೆಯನ್ನು ನಿಯಂತ್ರಿಸುವುದಾದರೂ ಹೇಗೆ? ಟ್ಯಾಂಕ್‌ನ ನಳದಲ್ಲಿ ನೀರು ನಿರಂತರವಾಗಿ ಸೋರುತ್ತಿದೆ. ಟ್ಯಾಂಕ್‌ನ ಸುತ್ತ ಅನುಪಯುಕ್ತ ವಸ್ತುಗಳು, ಪ್ಲಾಸ್ಟಿಕ್ ಚೀಲಗಳು, ಕೊಳೆತ ತರಕಾರಿಗಳು ಬಿದ್ದಿವೆ. ಇಷ್ಟು ಗಲೀಜು ಇದ್ದರೂ ಏಕೆ ತೆರವುಗೊಳಿಸಿಲ್ಲ ಎಂದು ಗುತ್ತಿಗೆದಾರ ರಮೇಶ್ ಅವರನ್ನು ಜಿಲ್ಲಾಧಿಕಾರಿ ರವೀಂದ್ರ ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿ ಸ್ವಚ್ಛತೆ ನಿರ್ವಹಣೆ

ಮಾರುಕಟ್ಟೆಯಲ್ಲೇ ನಿಂತ ಜಿಲ್ಲಾಧಿಕಾರಿಗಳು ನೌಕರರಿಂದ ಮಾರುಕಟ್ಟೆಯಲ್ಲಿನ ತ್ಯಾಜ್ಯವನ್ನು ತೆರವುಗೊಳಿಸುವುದನ್ನು ವೀಕ್ಷಿಸಿದರು. ಪ್ರತಿ ಮಳಿಗೆಗಳ ಬಳಿಗೆ ತೆರಳಿ ವ್ಯಾಪಾರಿಗಳು ಮತ್ತು ಕಾರ್ಮಿಕರ ಮಾಹಿತಿ ಪಡೆದರು. ಡೆಂಘೆ ಜ್ವರ ಸಮಸ್ಯೆ ಮತ್ತು ನಿಯಂತ್ರಣದ ಅಗತ್ಯತೆ ಬಗ್ಗೆ ವಿವರಿಸಿದರು. ಮಾರುಕಟ್ಟೆಯಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ಮೊದಲು ನಾಶಪಡಿಸಬೇಕು. ಕಾಲಕಾಲಕ್ಕೆ ಅನುಪಯುಕ್ತ ವಸ್ತುಗಳು, ತರಕಾರಿಗಳ ತ್ಯಾಜ್ಯಗಳು, ಕೊಳತೆ ಪದಾರ್ಥಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು. ಬಳಿಕ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ಅಲ್ಲಿಯೂ ಸ್ವಚ್ಛತೆಯ ಪರಿಶೀಲಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಮಹೇಶ್ ಕುವಾರ್, ತಾಲೂಕು ಆರೋಗ್ಯಧಿಕಾರಿ ಡಾ ಎನ್.ಮಂಜುಳಾ ಮತ್ತಿತರರು ಇದ್ದರು.