ಜಿಲ್ಲೆ

ಸ್ವಚ್ಛತಾ ಹೀ ಸೇವಾ ಪಾಕ್ಷಿಕ 14ರಿಂದ

ಚಿತ್ರದುರ್ಗ: ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ವಿಶೇಷ ಆಂದೋಲನ ಸೆ. 14ರಿಂದ ಆರಂಭವಾಗಿ ಅ. 2ರ ವರೆಗೆ ಜರುಗಲಿದೆ.

ಈ ಬಾರಿ ಸ್ವಭಾವ-ಸ್ವಚ್ಛತೆ, ಸಂಸ್ಕಾರ-ಸ್ವಚ್ಛತೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದೆ. 14ರಂದು ಸ್ಥಳೀಯ ಸಂಸ್ಥೆಗಳಿಂದ ಆಂದೋಲನಕ್ಕೆ ಚಾಲನೆ ದೊರೆಯಲಿದೆ. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳನ್ನು ತೊಡಗಿಸಿಕೊಂಡು ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಸಂಸದರು, ಶಾಸಕರು, ಜನಪ್ರತಿನಿಧಿಗಳು ಉದ್ಘಾಟಿಸಲಿದ್ದಾರೆ.

ಸಾರ್ವಜನಿಕರಿಗೆ ತಮ್ಮ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ ಮತ್ತು ನೈರ್ಮಲ್ಯದ ಮಹತ್ವದ ಕುರಿತು ಅರಿವು ಮೂಡಿಸಲು ನಾನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವುದು, ನಗರ ಸೌಂದರ್ಯ ಕಾಪಾಡುವ ಬಗೆ, ಮಾನವ ಸರಪಳಿ ನಿರ್ಮಾಣ, ಸ್ವಚ್ಛತಾ ಓಟ, ಸೈಕ್ಲಾಥಾನ್, ಮ್ಯಾರಥಾನ್ ಮೂಲಕ ಸಮುದಾಯ ಭಾಗವಹಿಸುವಿಕೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಏಕಕಾಲದಲ್ಲಿ ಫಿಟ್‌ನೆಸ್ ಜೊತೆಗೆ ಸ್ವಚ್ಛತೆ ಉತ್ತೇಜಿಸಲು ನಿರ್ಧರಿಸಲಾಗಿದೆ.

ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕಿಸಿ ಬೇರ್ಪಡಿಸಲು, ಗೊಬ್ಬರ ತಯಾರಿಸಲು, ಮರು ಬಳಕೆ ತಂತ್ರಜ್ಞಾನ, ಶಿಕ್ಷಣ ಸಂಸ್ಥೆಗಳಲ್ಲಿ ಕವನ, ಪ್ರಬಂಧ, ಚಿತ್ರಕಲೆ, ಪೋಸ್ಟರ್, ಸ್ವಚ್ಛ ಭಾರತ್ ಮಿಷನ್ ಸಂಬಂಧ ಸ್ಲೋಗನ್ ಬರವಣಿಗೆ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗುತ್ತಿದೆ.

ನಗರಸಭೆ, ಪುರಸಭೆ, ಪಪಂನಿಂದ ಸಾರ್ವಜನಿಕ ಸ್ಥಳಗಳು, ವಾಣಿಜ್ಯ, ಮಾರುಕಟ್ಟೆಗಳು, ಪ್ರವಾಸಿ ತಾಣಗಳು, ಅಭಯಾರಣ್ಯ, ಮೃಗಾಲಯಗಳಲ್ಲಿ ಸಾಮೂಹಿಕ ಶುಚಿತ್ವ ಆಂದೋಲನ, ಬೀದಿ ಬದಿ ವ್ಯಾಪಾರಸ್ಥರಲ್ಲಿ ತಿಳಿವಳಿಕೆ ಮೂಡಿಸಲು ಸಭೆಗಳು ನಡೆಯಲಿವೆ.

ಶಾಲಾ-ಕಾಲೇಜುಗಳಲ್ಲಿ ಶ್ರಮದಾನ, ಸುತ್ತ-ಮುತ್ತ ಸಸಿ ನೆಡುವುದು, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೂ ಶಿಕ್ಷಣ ಇಲಾಖೆ ಕ್ರಮವಹಿಸಲು ಜಿಲ್ಲಾಡಳಿತ ಸೂಚಿಸಿದೆ.

ಸ್ವಯಂ ಸೇವಕರನ್ನು ತೊಡಗಿಸಿಕೊಂಡು ಪಾರಂಪರಿಕ, ಪ್ರವಾಸಿ, ಧಾರ್ಮಿಕ ತಾಣಗಳ ಸುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ಲಾಟ್ ಫಾರಂಗಳಲ್ಲೂ ಶ್ರಮದಾನ ಚಟುವಟಿಕೆ ನಡೆಸಬೇಕು. ಯಾವ ಸಾರ್ವಜನಿಕ ಸ್ಥಳಗಳನ್ನು ಬಿಡದಂತೆ ಆಂದೋಲನ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.