ಜಿಲ್ಲೆ

ಸ್ವಚ್ಛ ಪರಿಸರದಿಂದ ಉತ್ತಮ ಆರೋಗ್ಯ

Chitradurga - Desk - Pranav Kumar

ಚಿತ್ರದುರ್ಗ: ಆರೋಗ್ಯ ವೃದ್ಧಿಯಾಗಲು ಎಲ್ಲರೂ ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದಕ್ಕೆ ನಾಗರಿಕರ ಸಹಕಾರ ತುಂಬಾ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಸಿ.ಎಸ್.ಗಾಯತ್ರಿ ಹೇಳಿದರು.

ಜಿಪಂ, ಗ್ರಾಪಂ ಹಾಗೂ ಇಕೋ ಕ್ಲಬ್‌ನಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಮದಕರಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಸುಂದರ ವಾತಾವರಣ ಕಲುಷಿತವಾಗುತ್ತಿದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ಮಾಡುವುದೇ ಪರಿಸರ ದಿನಾಚರಣೆಯ ಉದ್ದೇಶವಾಗಿದೆ ಎಂದರು.

ಎರಡು ವಿಧದ ಪೈಕಿ ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಮರು ಬಳಸುವ ಪ್ಲಾಸ್ಟಿಕ್‌ಗೆ ಮಾತ್ರ ಅವಕಾಶವಿದೆ. ಒಣ ಮತ್ತು ಹಸಿ ಕಸ ವಿಂಗಡಿಸಿ ಗ್ರಾಪಂನ ಸ್ವಚ್ಛ ವಾಹಿನಿ ವಾಹನದಲ್ಲಿ ಹಾಕುವಂತೆ ಸಲಹೆ ನೀಡಿದರು.

ಚಿತ್ರ ಡಾನ್‌ಬಾಸ್ಕೋ ಸಂಸ್ಥೆಯ ಮಹಂತೇಶ್ ಮಾತನಾಡಿ, ಪ್ಲಾಸ್ಟಿಕ್ ಕೊನೆಗೊಳಿಸುವ, ಸಾವಯವ ಕೃಷಿ, ಪೌಷ್ಟಿಕ ಆಹಾರ ಸೇವನೆ, ಶಾಲಾ ಉದ್ಯಾನವನ, ಕೈತೋಟ ಸೇರಿ ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಯಿತು. ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಮದಕರಿಪುರ ಗ್ರಾಪಂ ಅಧ್ಯಕ್ಷೆ ಭವ್ಯಾ, ಸದಸ್ಯರಾದ ಸ್ವಾಮಿ, ನವೀನ್, ರಂಜಿತ್, ಮಂಜುಳಾ, ಯಶೋಧಾ, ಪಿಡಿಒ ನಾಗರಾಜ್, ಸ್ವಚ್ಛ ಭಾರತ ಮಿಷನ್ (ಗ್ರಾ) ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್, ಎಸ್‌ಡಬ್ಲುೃಎಂ ಸಮಾಲೋಚಕಿ ಪ್ರಮೀಳಾ, ಮುಖ್ಯಶಿಕ್ಷಕಿ ರೇಖಾ ಇತರರಿದ್ದರು.