ಜಿಲ್ಲೆ

ಸ್ವಚ್ಛ ಪರಿಸರದಲ್ಲಿದೆ ಆರೋಗ್ಯದ ಗುಟ್ಟು

Chitradurga - Desk - Pranav Kumar

ಚಿತ್ರದುರ್ಗ: ವಾಂತಿ-ಭೇದಿ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಆಶ್ರಯ ಬಡಾವಣೆಯ 1 ಮತ್ತು 2ನೇ ಹಂತದ ಮನೆಗಳಿಗೆ ಭಾನುವಾರ ಆರೋಗ್ಯ ಇಲಾಖೆ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಸ್ವಚ್ಛ ಪರಿಸರ ಮತ್ತು ವೈಯಕ್ತಿಕ ಶುಚಿತ್ವದಲ್ಲಿದೆ ಆರೋಗ್ಯದ ಗುಟ್ಟು ಎಂದು ಜನರೊಂದಿಗೆ ಆಪ್ತ ಸಮಾಲೋಚನೆ ಸಂದರ್ಭ ಕಿವಿಮಾತು ಹೇಳಿದರು.


ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಜನಜಾಗೃತಿಯಲ್ಲಿ ಹಿರಿಯರು-ಕಿರಿಯರು ಸೇರಿ ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅರಿವು ಮೂಡಿಸಲಾಯಿತು.


ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಕ್ಷಿಪ್ರ ನಿಗಾ ತಂಡ, ಆಶಾ ಕಾರ್ಯಕರ್ತೆಯರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮಾಹಿತಿ ಶಿಕ್ಷಣ ಸಂವಹನ ನಡೆಸಿಕೊಟ್ಟರು.


ಕಾಯಿಸಿ ಆರಿಸಿದ ನೀರು ಬಳಸಿ, ಮಸಾಲೆ ಪದಾರ್ಥಗಳಿಂದ ದೂರವಿರಿ, ನೊಣಗಳು ಊಟದ ಮೇಲೆ ಕುಳಿತುಕೊಳ್ಳದಂತೆ ಜಾಗ್ರತೆ ವಹಿಸಿ, ಬಯಲು ಶೌಚ ಮಾಡಬೇಡಿ, ಘನ ತ್ಯಾಜ್ಯ ವಸ್ತುಗಳನ್ನು ಸೂಕ್ತ ಸ್ಥಳದಲ್ಲೇ ವಿಲೇವಾರಿ ಮಾಡಿ ಎಂದು ತಂಡ ಮನವಿ ಮಾಡಿತು.


ವೈದ್ಯಾಧಿಕಾರಿ ಡಾ.ಯಶಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರರೆಡ್ಡಿ ಇತರರಿದ್ದರು.