ಮುಂಡರಗಿ: ಮದುವೆಗಾಗಿ 47 ದಿನ ರಜೆಗೆ ಆಗಮಿಸಿದ ಸೈನಿಕನೊಬ್ಬ ಕರೊನಾ ಭೀತಿಯಿಂದ ಸ್ವಗ್ರಾಮ ಪ್ರವೇಶಿಸದೇ ತಮ್ಮ ಜಮೀನಿನ ಮನೆಯಲ್ಲಿ ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗಿದ್ದಾರೆ.
ತಾಲೂಕಿನ ಜಂತ್ಲಿ-ಶಿರೂರ ಗ್ರಾಮದ ಸೋಮೇಶ ಪೂಜಾರ ಅವರೇ ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆದವರು. ಇವರು ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜು. 7ರಂದು ಜಮ್ಮುವಿನಿಂದ ವಿಮಾನದ ಮೂಲಕ ಬೆಂಗಳೂರಿಗೆ, ಅಲ್ಲಿಂದ ಕಾರ್ ಮೂಲಕ ಜು. 8ರಂದು ಜಂತ್ಲಿ-ಶಿರೂರ ಗ್ರಾಮಕ್ಕೆ ಬಂದಿದ್ದಾರೆ.
ಬೆಂಗಳೂರಿನಿಂದ ನೇರವಾಗಿ ಗ್ರಾಮದಿಂದ 2 ಕಿಮೀ ದೂರದ ತಮ್ಮ ಹೊಲದಲ್ಲಿನ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ತಂದೆ-ತಾಯಿ, ಸಹೋದರರು ಸೇರಿ 20ಕ್ಕೂ ಹೆಚ್ಚು ಸದಸ್ಯರಿರುವ ತಮ್ಮ ಕುಟುಂಬಸ್ಥರು ಮತ್ತು ಗ್ರಾಮಕ್ಕೆ ತನ್ನಿಂದ ತೊಂದರೆ ಆಗದಿರಲೆಂದು 14 ದಿನ ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗಿದ್ದಾರೆ. ಸೋಮೇಶ ಅವರ ಮದುವೆ ಆಗಸ್ಟ್ 13ರಂದು ನಿಶ್ಚಯವಾಗಿದೆ.
ಸೋಮೇಶ ಅವರಿಗೆ ಪ್ರತಿದಿನ ಸಹೋದರರು ಊಟ ತಂದು ಕೊಡುತ್ತಿದ್ದಾರೆ. ಜಮೀನಿನಲ್ಲಿ ನೀರಾವರಿ ಸೌಲಭ್ಯ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ. ಜಮೀನಿನಲ್ಲಿ ಖಾಲಿ ಇರದೇ ತಾವೊಬ್ಬರೇ ಕೃಷಿ ಕೆಲಸ ಮಾಡಿ ದಿನಗಳೆಯುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನ್ನಿಂದ ನನ್ನ ಕುಟುಂಬ, ಗ್ರಾಮಕ್ಕೆ ತೊಂದರೆ ಆಗದಿರಲೆಂಬ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಜಮೀನಿನಲ್ಲಿ ಕ್ವಾರಂಟೈನ್ ಇದ್ದೇನೆ. ಸಹೋದರರು ಮನೆಯಿಂದ ಊಟ ತಂದು ಕೊಡುತ್ತಾರೆ. 14 ದಿನಗಳು ಪೂರ್ಣಗೊಂಡ ನಂತರ ಕರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಬಂದ ನಂತರ ಊರೊಳಗಿನ ಮನೆಗೆ ಹೋಗುತ್ತೇನೆ. ಆ ನಂತರ ಮದುವೆ ಕಾರ್ಯ ಕೈಗೊಳ್ಳಲಾಗುತ್ತದೆ.| ಸೋಮೇಶ ಪೂಜಾರ, ಸೈನಿಕ