ಪಾಂಡವಪುರ ಪಟ್ಟಣದ ವಿ.ಸಿ.ಕಾಲನಿಯಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ಅನುದಾನದ ಕಾಮಗಾರಿಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಭೂಮಿಪೂಜೆ ನೆರವೇರಿಸಿದರು. ವಿ.ಕೆ.ಅರ್ಚನಾ ಚಂದ್ರು, ವೀಣಾ, ಚೌಡಪ್ಪ, ಆರ್.ಸೋಮಶೇಖರ್ ಇದ್ದರು. 
ಜಿಲ್ಲೆ

ಸ್ವಕ್ಷೇತ್ರದಲ್ಲೇ ಎಚ್.ಡಿ.ರೇವಣ್ಣ ಸ್ಪರ್ಧೆ

ಪಾಂಡವಪುರ: ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ರೇವಣ್ಣ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ವಿ.ಸಿ. ಕಾಲನಿ ಮತ್ತು ಮಹಾಕಾಳೇಶ್ವರಿ ಬಡಾವಣೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ 60 ಲಕ್ಷ ರೂ. ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಎಚ್.ಡಿ.ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರ ತೊರೆದು ಕೆ.ಆರ್.ಪೇಟೆ ಅಥವಾ ಇನ್ಯಾವುದೇ ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಸ್ವ ಕ್ಷೇತ್ರದಲ್ಲೇ ಸ್ಪರ್ಧಿಸಿ ಅತ್ಯಂತ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲುತ್ತಾರೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದರು.

ಜಿಲ್ಲೆಯ ಜೆಡಿಎಸ್‌ನಲ್ಲಿ ಯಾವುದೇ ಬಿರುಕು ಅಥವಾ ಭಿನ್ನಾಭಿಪ್ರಾಯವಿಲ್ಲ. ಕೆ.ಆರ್.ಪೇಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು ಪಕ್ಷದ ಹಿರಿಯ ನಾಯಕರು. ಕಳೆದ ಉಪಚುನಾವಣೆಯ ಟಿಕೆಟ್ ಘೋಷಣೆಗೂ ಮುನ್ನ ಇದೇ ನಿಮಗೆ ಕೊನೆ ಚುನಾವಣೆ ಮುಂದಿನ ಚುನಾವಣೆಯಲ್ಲಿ ಬಿ ಫಾರಂ ನೀಡುವುದಿಲ್ಲ ಎಂದು ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದರು. ಜತೆಗೆ ಕೆ.ಆರ್.ಪೇಟೆ ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರ ಅಪೇಕ್ಷೆಯಂತೆ ಈಗಾಗಲೇ ಎಚ್.ಟಿ.ಮಂಜು ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಜಿಲ್ಲಾ ನಾಯಕನಾಗಿ ಕೆಲಸ ಮಾಡಿರುವ ಅನುಭವವಿರುವ ಕಾರಣ ಚುನಾವಣೆಯೊಳಗೆ ಎಲ್ಲ ಅಸಮಾಧಾನಿತರನ್ನು ಸಮಾಧಾನಪಡಿಸಿ ಒಟ್ಟಿಗೆ ಕರೆದೊಯ್ಯುತ್ತೇನೆ. ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದ್ದೇ ಇದೆ. ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ರಾಜಕಾರಣದಲ್ಲಿದ್ದಾರೆ. ಅವರ ಪುತ್ರಿಗೂ ಟಿಕೆಟ್ ನೀಡುವ ಚರ್ಚೆ ನಡೆಯುತ್ತಿದೆ. ಅದೇ ರೀತಿ ಸಿದ್ದರಾಮಯ್ಯ ಅವರ ಪುತ್ರ ಕೂಡ ಶಾಸಕರಾಗಿದ್ದಾರೆ. ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಅವರ ಇಡೀ ಕುಟುಂಬದ ಸದಸ್ಯರು ಒಂದು ಕುಟುಂಬವಾಗಿ ರಾಜ್ಯದಾದ್ಯಂತ ಕೆಲಸ ಮಾಡುತ್ತಿರುವ ಕಾರಣ ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ಉಳಿದುಕೊಂಡಿದೆ. ಹೀಗಾಗಿ ಕುಟುಂಬ ರಾಜಕಾರಣದ ಪ್ರಶ್ನೇಯೇ ಉದ್ಭವಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೂರಜ್ ರೇವಣ್ಣ ಅವರು ಕುಮಾರಸ್ವಾಮಿ ಅವರನ್ನು ಕಡೆಗಣಿಸಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಅಪ್ಪ-ಮಕ್ಕಳ ವಿಚಾರಕ್ಕೆ ನಿವ್ಯಾಕೆ ಹೋಗುತ್ತೀರಾ? ದೇವೇಗೌಡರ ಮನೆಯ ವಿಚಾರಕ್ಕೆ ಹೋದವರ ಹಲ್ಲು ಉದುರಿಹೋಗುತ್ತದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಮುಖ್ಯಾಧಿಕಾರಿ ವೀಣಾ, ಇಂಜಿನಿಯರ್ ಚೌಡಪ್ಪ, ಸದಸ್ಯರಾದ ಆರ್.ಸೋಮಶೇಖರ್, ಸುನೀತಾ ಕದರೇಶ್, ಸುಧಾ ಜೈರಾಮ್, ಚಂದ್ರಶೇಖರ್, ಆರ‌್ಮುಗಂ ಇತರರು ಇದ್ದರು.