ಬಂಕಾಪುರ: ಪಟ್ಟಣದ ಬಡಜನರಿಗೆ ಸೂರು ಒದಗಿಸುವ ಸರ್ಕಾರದ ಯೋಜನೆಯ ಜಿ+1 ಮಾದರಿ (ಒಂದಸ್ತಿನ) ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಫಲಾನುಭವಿಗಳ ಸೂರಿನ ಕನಸು ಕೆಲ ತಿಂಗಳುಗಳಲ್ಲಿಯೇ ನನಸಾಗಲಿದೆ.
2012-13ರಲ್ಲಿ 25.76 ಕೋಟಿ ರೂ. ಅನುದಾನದಲ್ಲಿ 604 ಮನೆ ಕಟ್ಟಿಸುವ ಗುರಿ ಹೊಂದಿದ್ದ ಪುರಸಭೆ, ಅರ್ಹ ಫಲಾನುಭವಿಗಳಿಂದ 348 ಅರ್ಜಿ ಸ್ವೀಕರಿಸಿತ್ತು. ಅಲ್ಲದೆ, ಪ್ರತಿ ಫಲಾನುಭವಿಯಿಂದ 40 ಸಾವಿರ ರೂ. ವಂತಿಗೆ ಸಂಗ್ರಹಿಸಿತ್ತು. ಮನೆ ನಿರ್ವಣಕ್ಕೆ 2012-13ರಲ್ಲಿಯೇ ಪಟ್ಟಣದ ಹೌಸಿಂಗ್ ಬೋರ್ಡ್ ಪಕ್ಕದಲ್ಲಿ ಪುರಸಭೆಯ 8 ಎಕರೆ ಜಾಗ ಗುರುತಿಸಲಾಗಿತ್ತು. ಯೋಜನೆ ಪ್ರಕಾರ ಆಯ್ಕೆಯಾದ ಫಲಾನುಭವಿಗಳ ವಂತಿಕೆ ಜತೆಗೆ ಸರ್ಕಾರದ 1 ಲಕ್ಷ ರೂ. ಸಹಾಯಧನ, ಬ್ಯಾಂಕ್ಗಳಿಂದ 75 ಸಾವಿರ ರೂ. ಸಾಲ ಸೌಲಭ್ಯದೊಂದಿಗೆ ಮನೆ ನಿರ್ವಣಕ್ಕೆ ಪುರಸಭೆ ಮುಂದಾಗಿತ್ತು. ಆದರೆ, ಸ್ಥಳೀಯ ಬ್ಯಾಂಕ್ಗಳು ಸಾಲ ನೀಡಲು ಮುಂದಾಗದ್ದರಿಂದ ಯೋಜನೆಗೆ ಹಿನ್ನಡೆಯಾಗಿತ್ತು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜ್ಯ ಸರ್ಕಾರದ ರಾಜೀವ ಗಾಂಧಿ ವಸತಿ ಯೋಜನೆ ಸಹಭಾಗಿತ್ವದಲ್ಲಿ ಫಲಾನುಭವಿಗಳಿಗೆ ಹೊರೆಯಾಗದಂತೆ ಮನೆಗಳನ್ನು ನಿರ್ವಿುಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಜಿ+1 ಮಾದರಿ ಮನೆಗಳ ನಿರ್ವಣಕ್ಕೆ 9 ಕೋಟಿ ರೂ. ಮಂಜೂರು ಮಾಡಿದೆ. ಕಳೆದ ವರ್ಷವೇ ಮನೆ ನಿರ್ವಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಕಳೆದ ಬಾರಿ ನೆರೆ ಹಾವಳಿ ಮತ್ತು ಕೆಲ ತಾಂತ್ರಿಕ ಕಾರಣಗಳಿಂದ ನಿಯೋಜಿತ ಗುತ್ತಿಗೆ ಕಂಪನಿ ಮನೆಗಳ ನಿರ್ಮಾಣ ಕಾರ್ಯದಿಂದ ಹಿಂದೆ ಸರಿದ ಕಾರಣ ಕಾಮಗಾರಿ ಮತ್ತೆ ನನೆಗುದಿಗೆ ಬಿದ್ದಿತ್ತು.
ಇದೀಗ ಕೇಂದ್ರ ಸರ್ಕಾರದ 9 ಕೋಟಿ ರೂ., ರಾಜ್ಯ ಸರ್ಕಾರದ 4.5 ಕೋಟಿ ರೂ., ಪುರಸಭೆಯ ಇತರ ಅನುದಾನಗಳಿಂದ 7.55 ಕೋಟಿ ರೂ. ಹಾಗೂ ತಲಾ 40 ಸಾವಿರ ರೂ.ನಂತೆ ಫಲಾನುಭವಿಗಳು ಪುರಸಭೆಗೆ ಜಮೆ ಮಾಡಿರುವ 4.71 ಕೋಟಿ ರೂ. ಸೇರಿ ಒಟ್ಟು 28.76 ಕೋಟಿ ರೂ. ಅನುದಾನದಲ್ಲಿ 604 ಮನೆಗಳ ನಿರ್ವಣವಾಗಲಿದೆ. ಕಾಮಗಾರಿ ಆರಂಭವಾಗಿರುವುದರಿಂದ ಫಲಾನುಭವಿಗಳ ಸ್ವಂತ ಸೂರಿನ ಕಸನು ನನಸಾಗುವತ್ತ ಸಾಗಿದೆ.
ಮನೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳದ್ದರಿಂದ ಸ್ವಂತ ಸೂರಿನ ಕನಸು ಕೈಬಿಟ್ಟು ವಂತಿಗೆ ಹಣವಾದರೂ ಸಿಕ್ಕರೆ ಸಾಕು ಅನಿಸಿತ್ತು. ಆದರೆ, ಸರ್ಕಾರ ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭಿಸಿರುವುದರಿಂದ ಸ್ವಂತ ಸೂರಿನ ಆಸೆ ಮತ್ತೆ ಚಿಗುರೊಡೆದು ನನ್ನ ಹೆಸರಿಗೆ ಒಂದು ಮನೆ ನಿರ್ವಣಗೊಳ್ಳುತ್ತಿರುವುದು ಖುಷಿ ತಂದಿದೆ. | ಶಾರವ್ವ ಹುಬ್ಬಳ್ಳಿ, ಫಲಾನುಭವಿ ಬೆಂಗಳೂರು ಮೂಲದ ಪ್ರತಿಷ್ಠಿತ ಕಂಪನಿಯಿಂದ ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅಲ್ಲದೆ, ನಿರಪಯುಕ್ತ ನೀರು ಹೊರಹಾಕಲು ಮತ್ತು ನೈರ್ಮಲ್ಯ ಕಾಪಾಡಲು ದೊಡ್ಡ ಚರಂಡಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೇ ತಿಂಗಳುಗಳಲ್ಲಿ ಫಲಾನುಭವಿಗಳು ಉತ್ತಮ ಗುಣಮಟ್ಟದ ಮನೆಗಳನ್ನು ಪಡೆಯಲಿದ್ದಾರೆ. | ರೇಣುಕಾ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ