ಜಿಲ್ಲೆ

ಸ್ವಂತ ಖರ್ಚಲ್ಲಿ ಪುಣ್ಯಕೋಟಿ ಗೋಶಾಲೆ

ಭಟ್ಕಳ: ಮುರ್ಡೆಶ್ವರ ದೇವಾಲಯದ ಉಪಾಧಿವಂತ, ಜ್ಯೋತಿಷಿ ಕೃಷ್ಣಾನಂದ ಶಿವರಾಮ ಭಟ್ ಅವರ 15 ವರ್ಷದ ಸಂಕಲ್ಪ ಸಾಕಾರಗೊಂಡಿದೆ. ಸ್ವತಃ ಕೋಟ್ಯಂತರ ವ್ಯಯಿಸಿ ನಿರ್ವಿುಸಿದ ಆಚಾರ್ಯ ಭವನ ಮತ್ತು ಪುಣ್ಯಕೋಟಿ ಬೃಹತ್ ಗೋಶಾಲೆ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.

ಮುರ್ಡೆಶ್ವರದ ಬಳಿ ನಿರ್ವಿುಸಿರುವ ನೂತನ ಆಚಾರ್ಯ ಭವನ ಮತ್ತು ಪುಣ್ಯಕೋಟಿ ಬೃಹತ್ ಗೋಶಾಲೆಯನ್ನು ಫೆ. 13ರಂದು ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಬೈಲೂರು ಗ್ರಾಮದ ನೀರಗದ್ದೆ (ಬಸ್ತಿಮಕ್ಕಿ) ಎಂಬಲ್ಲಿ ಕೃಷ್ಣಾನಂದ ಭಟ್ ಅವರು ಗೋಶಾಲೆ ನಿರ್ವಿುಸಿದ್ದು, ಜನಾಕರ್ಷಣೆಯ ಕೇಂದ್ರವಾಗಿದೆ. 60 ವರ್ಷದ ಇವರಿಗೆ ಪೌರೋಹಿತ್ಯವೇ ಜೀವನಾಧಾರ. ಯಾರ ಮುಂದೆ ಕೈಚಾಚದೆ, ತಮ್ಮದೆ ಚಿನ್ನದ ಒಡವೆಗಳನ್ನು ಅಡವಿಟ್ಟು ಭವನ ನಿರ್ವಿುಸಿದ್ದು ಗಮನಾರ್ಹ.

ಗೋವುಗಳಿಗೆ ಆಶ್ರಯ ತಾಣ: ಸ್ವಂತ 70 ಗುಂಟೆ ಜಾಗದಲ್ಲಿ ಧ್ಯಾನಮಂದಿರ ಹಾಗೂ ಗೋಸ್ವರ್ಗ ನಿರ್ವಿುಸಲಾಗಿದೆ. ಆಚಾರ್ಯ ಭವನ (ಧ್ಯಾನ ಮಂದಿರ) ಪ್ರವೇಶಿಸುತ್ತಿದ್ದಂತೆ ಶಂಕರಾಚಾರ್ಯರ ಆಕರ್ಷಕ ಮೂರ್ತಿ ಕಣ್ಣಿಗೆ ಬೀಳುತ್ತದೆ. ಇದರೊಟ್ಟಿಗೆ ರಾಘವೇಶ್ವರ ಶ್ರೀಗಳು, ರಾಘವೇಂದ್ರ ಭಾರತೀ ಶ್ರೀಗಳು, ರಾಮಚಂದ್ರ ಭಾರತೀ ಶ್ರೀಗಳು, ರಾಘವೇಶ್ವರ ಭಾರತೀ ಶ್ರೀಗಳ ಶಿಲ್ಪ ನಿರ್ವಿುಸಲಾಗಿದೆ. ಶಂಕರಾಚಾರ್ಯರು ಬರೆದ ಭಜಗೋವಿಂದನ 31 ಶ್ಲೋಕಗಳನ್ನು ನಾಲ್ಕೂ ದಿಕ್ಕಲ್ಲಿ ಬರೆಯಲಾಗಿದೆ. ಕಟ್ಟಡದಲ್ಲಿ ಗೋವುಗಳಿಗೆ ದಿನವಿಡಿ ನೀರು, ಮೇವಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ. 12ರಂದು ಮಲೆನಾಡು ಗಿಡ್ಡ ತಳಿಯ ನೂರಕ್ಕೂ ಹೆಚ್ಚು ಗೋವುಗಳು ಬರಲಿವೆ.

ಸಭಾಭವನ, ಶ್ರೀಗಳು ಬಂದಾಗ ತಂಗಲು ಕೊಠಡಿ, ವಿಶಾಲವಾದ ಅಡುಗೆಮನೆ, ಹತ್ತಾರು ಕೊಠಡಿಗಳು, ಬಾಗಿಲ ಕಂಬಗಳನ್ನು ಶಿಲೆಗಳಲ್ಲೇ ಕೆತ್ತನೆ ಮಾಡಲಾಗಿದೆ. ಗಣಪತಿ, ವಿಷ್ಣು, ಶಿವ ಮೂರ್ತಿಗಳು, ಗಂಗೆ, ಯಮುನೆ, ಗಜಲಕ್ಷ್ಮೀ ಹಾಗೂ ಕಾಮಧೇನು ಮೂರ್ತಿಗಳು ಗಮನ ಸೆಳೆಯುತ್ತವೆ. ಆಚಾರ್ಯ ಭವನ, ಗೋಶಾಲೆ ನಿರ್ವಿುಸಲು 6 ವರ್ಷವಾಗಿದೆ.

ಶಂಕರಾಚಾರ್ಯರ ಸ್ಮರಣೆ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಆಶೀರ್ವಾದದಿಂದ ಇವೆಲ್ಲ ಸಾಧ್ಯವಾಗಿದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಮಾತ್ರ ನಾವು ಬದುಕಿದ್ದು ಸಾರ್ಥಕವಾಗುತ್ತದೆ. ನಿಸ್ವಾರ್ಥವಾಗಿ ಗೋವಿನ ರಕ್ಷಣೆ ಆಗುವುದಾದರೆ ಅದಕ್ಕಿಂತ ದೊಡ್ಡ ಭಾಗ್ಯ ಯಾವುದೂ ಇಲ್ಲ. | ಕೃಷ್ಣಾನಂದ ಶಿವರಾಮ ಭಟ್ಗೋ ಸ್ವರ್ಗದ ನಿರ್ವತೃ