ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರದಲ್ಲಿ ಸ್ಲಮ್ಳ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಹು-ಧಾ ಪೂರ್ವ ಕ್ಷೇತ್ರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಸ್ಲಮ್ ನಿವಾಸಿಗರ ಮನೆಗಳ ಹಕ್ಕುಪತ್ರ ವಿತರಣೆ, ರಸ್ತೆ, ನೀರು ಸೇರಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ನಿಯಮಿತವಾಗಿ ಅನುದಾನ ತರಲಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲ ಮಾಡಲಾಗುತ್ತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆಗೆ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಪರ ಮತ್ತು ಪಾರದರ್ಶಕ ಆಡಳಿತದಿಂದ ಜನಾನುರಾಗಿಯಾಗಿದೆ ಎಂದು ಹೇಳಿದರು.
ಇಂದು ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕವಾಗಿ ಕುಸಿತ ಕಂಡಿದೆ. ಇದು ದೇಶದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಜಗತ್ತಿನಲ್ಲೇ ದೇಶವನ್ನು ಉತ್ತಮ ಆರ್ಥಿಕತೆ ಕಡೆಗೆ ಕೊಂಡೊಯ್ಯುತ್ತೇನೆಂದು ಬೊಬ್ಬೆ ಹೊಡೆಯುವ ದೇಶದ ಆರ್ಥಿಕ ಸಚಿವೆ ನಿರ್ಮಲ ಸಿತಾರಾಮನ್ ಅವರು ದೇಶವನ್ನು ಅಧೋಗತಿಗೆ ತಳ್ಳುತ್ತಿರುವುದಕ್ಕೆ ರೂಪಾಯಿ ಮೌಲ್ಯ ಕುಸಿತವೇ ನಿದರ್ಶನ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಅಲ್ತಾಫ್ ಹಳ್ಳೂರು, ಪಾಲಿಕೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ನಾಯಕರು ಇದ್ದರು.