ಕಲಬುರಗಿ: ಸ್ಲಂ ಜನರಿಗೆ ಹಕ್ಕು ಪತ್ರ ನೋಂದಣಿ ಮಾಡಿಸಬೇಕು, ಈ ಖಾತಾ ಪ್ರಕ್ರಿಯೆಗಳನ್ನು ಚುರುಕುಗೊಳಿಸಬೇಕು ಎಂದು ಸ್ಲಂ ಜನಾಂದೋಲನದ ಸಂಘಟನೆಯ ಅಧ್ಯಕ್ಷೆ ಗೌರಮ್ಮ ಮಾಕಾ ಆಗ್ರಹಿಸಿದರು.
ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಬೇಕು, ೨೦೨೫-೨೬ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸ್ಲಂ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿ ಸ್ಲಂ ನಿವಾಸಿಗಳಿಗೆ ನಿರ್ಮಿಸುತ್ತಿರುವ ವಸತಿ ಸಮುಚ್ಛಯಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು, ಸ್ಲಂ ನಿವಾಸಿಗಳ ಕಷ್ಟದ ಅನುಭವವಿಲ್ಲದೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ನವೀನರಾಜ್ ಸಿಂಗ್‌ರನ್ನು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸ್ಲಂ ನಿವಾಸಿಗಳ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಸೌಧದ ಮುಂದೆ ಡಿ.೧೩ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಸ್ಲಂ ಜನಾಂದೋಲನದ ಸಂಚಾಲಕಿ ರೇಣುಕಾ ಸರಡಗಿ, ಶರಣು ಕಣ್ಣಿ, ಸಭಿತಾ ಕೊಲ್ಲೂರ, ಅಂಬರೀಶ ಇತರರಿದ್ದರು.