ಜಿಲ್ಲೆ

ಸ್ಮಾರ್ಟ್‌ಸಿಟಿ ಕಾಮಗಾರಿಯಿಂದ ಜನ ಹೈರಾಣ ; ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ

ತುಮಕೂರು : ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬದಿಂದಾಗಿ ನಗರದ ಜನತೆ ರೋಸಿ ಹೋಗಿದ್ದು, ಪ್ರತಿನಿತ್ಯ ಹಿಡಿಶಾಪ ಹಾಕುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಡಿಪೇಟೆ, ಎಂ.ಜಿ.ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ವ್ಯಾಪಾರಸ್ಥರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಶನಿವಾರ ವರ್ತಕರು, ಸ್ಮಾರ್ಟ್‌ಸಿಟಿ, ಪಾಲಿಕೆ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು, ಟ್ರಾಫಿಕ್ ಪೊಲೀಸರನ್ನು ತಮ್ಮ ಕಚೇರಿಯಲ್ಲಿ ತುರ್ತು ಸಭೆ ಕರೆದು ಚರ್ಚಿಸಿದರು.

ಪ್ರತಿನಿತ್ಯ ಜನದಟ್ಟಣೆ ಇರುವ ರಸ್ತೆಗಳು ಇವಾಗಿದ್ದು, ಕೆಲಸ ಮಾಡುವ ಸಮಯದಲ್ಲಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನಿಗದಿತ ವೇಳೆಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಆದಷ್ಟು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ವರ್ತಕರು ಹಾಗೂ ಸಾರ್ವಜನಿಕರಿಗೆ ನೆಮ್ಮದಿ ನೀಡಿ ಎಂದು ಕಟ್ಟುನಿಟ್ಟಾಗಿ ಹೇಳಿದರು.

ರಾತ್ರಿ ಅಂಗಡಿ ಮುಚ್ಚಿದಾಗ: ರಾತ್ರಿ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋಗುವಾಗ ಯಾವುದೇ ಕಾಮಗಾರಿ ನಡೆಯುತ್ತಿರುವುದಿಲ್ಲ. ಬೆಳಗ್ಗೆ ಅಂಗಡಿ ತೆರೆಯುವುದರೊಳಗೆ ಯಾವುದಾದರೂ ಗುಂಡಿ ತೋಡಿರುತ್ತಾರೆ. ಮೊದಲೇ ಮಾಹಿತಿ ನೀಡಿದರೆ ನಾವು ಕೂಡ ಮಾನಸಿಕವಾಗಿ ಸಿದ್ಧರಾಗಿರುತ್ತೇವೆ ಎಂದು ವರ್ತಕರು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮೊದಲು ನಿಮ್ಮನಿಮ್ಮಲ್ಲೇ ಸಮನ್ವಯತೆ ಇರುವುದಿಲ್ಲ. ಒಂದು ಕಡೆ ಪಾಲಿಕೆ, ಮತ್ತೊಂದು ಕಡೆ ಸ್ಮಾರ್ಟ್‌ಸಿಟಿ, ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿರುತ್ತೀರಾ. ನೀವು ಮೊದಲೇ ಸ್ಥಳೀಯರಿಗೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರೆ ಇಷ್ಟೆಲ್ಲಾ ಅವಾಂತರ ಆಗುವುದಿಲ್ಲ. ಇನ್ನಾದರೂ ಸಮನ್ವಯತೆಯಿಂದ ಕೆಲಸ ಮಾಡಿ. ವರ್ತಕರು, ಸಾರ್ವಜನಿಕರು ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಅನಾನುಕೂಲ ಸಹಿಸಿಕೊಂಡು ಸಹಕರಿಸಬೇಕು ಎಂದು ವಿನಂತಿಸಿದರು. ಶಾಸಕರ ಮನವಿಗೆ ಸ್ಪಂದಿಸಿದ ವರ್ತಕರು ನಾವು ಸಹಕಾರ ನೀಡುತ್ತೇವೆ. ಆದಷ್ಟೂ ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಸ್ಮಾರ್ಟ್‌ಸಿಟಿ ಎಂಡಿ ಬಿ.ಟಿ.ರಂಗಸ್ವಾಮಿ, ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್, ಪಾಲಿಕೆ ಸದಸ್ಯ ಮಹೇಶ್, ಪಾಲಿಕೆ ಇಇ ಆಶಾ, ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಇಇ ಚಂದ್ರಶೇಖರ್, ಎಇಇ ಚನ್ನವೀರಸ್ವಾಮಿ, ಮಂಡಿಪೇಟೆ ಹಾಗೂ ಎಂಜಿ ರಸ್ತೆಯ ವರ್ತಕರು ಭಾಗವಹಿಸಿದ್ದರು.

ಎಂ.ಜಿ .ರಸ್ತೆ, ಮಂಡಿಪೇಟೆ ರಸ್ತೆಯಲ್ಲಿನ ಸ್ಮಾರ್ಟ್ ಸಿಟಿ ಕಾಮಗಾರಿಗಳು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಪರಸ್ಪರ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಸ್ಥಳೀಯರಿಗೆ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಬೇಕು. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ