ಜಿಲ್ಲೆ

ಸ್ಮಾರ್ಟ್‌ಸಿಟಿ ಕಾಮಗಾರಿ ತೃಪ್ತಿದಾಯಕ ಇಲ್ಲ

ಹುಬ್ಬಳ್ಳಿ : ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ತೃಪ್ತಿ ಇಲ್ಲ ಎಂದು ಹೇಳಿರುವ ಮೇಯರ್ ಈರೇಶ ಅಂಚಟಗೇರಿ, ಸ್ಮಾರ್ಟ್‌ಸಿಟಿಯಿಂದ ನಿರ್ಮಿಸಿರುವ ಸೌಲಭ್ಯಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿಕೊಳ್ಳುವ ಮೊದಲು ಅವುಗಳ ಗುಣಮಟ್ಟ ಹಾಗೂ ಮತ್ತಿತರ ಅಂಶಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್, ಸ್ಮಾರ್ಟ್‌ಸಿಟಿಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಇಂದಿರಾ ಗಾಜಿನ ಮನೆಯಲ್ಲಿ ನಿರ್ಮಿಸಿರುವ ಸೌಲಭ್ಯ, ನಗರದ ವಿವಿಧೆಡೆಯ ರಸ್ತೆ ಹಾಗೂ ಮತ್ತಿತರ ವಿಷಯಗಳ ಕುರಿತು ಹು-ಧಾ ಸ್ಮಾರ್ಟ್‌ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವು ಪತ್ರಗಳನ್ನು ಬರೆಯಲಾಗಿದೆ. ಆದರೆ, ಅವರಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆಯಲ್ಲಿ 2 ಸಾವಿರ ಕೋಟಿ ಹಾಗೂ ಬೆಳಗಾವಿಯಲ್ಲಿ 3 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಹುಬ್ಬಳ್ಳಿಯಲ್ಲಿ ಕೇವಲ 1,598 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದಾಗಿ ಸ್ಮಾರ್ಟ್‌ಸಿಟಿ ಕಂಪನಿ ಅಧಿಕಾರಿಗಳು ಹೇಳುತ್ತಿದ್ದಾರಾದರೂ, ಇದುವರೆಗೆ ಯಾವುದೇ ಸೌಲಭ್ಯಗಳನ್ನು ಹಸ್ತಾಂತರಿಸಿಕೊಳ್ಳುವಂತೆ ಪಾಲಿಕೆಗೆ ಸೂಚಿಸಿಲ್ಲ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿಯಿಂದ ಕೈಗೊಂಡಿರುವ ಬಸ್‌ಶೆಲ್ಟರ್ ನಿರ್ಮಾಣದ ಕಾಮಗಾರಿ ಕಳಪೆಯಾಗಿರುವುದು ಗಮನಕ್ಕೆ ಬಂದಿದೆ. ಕಾಮಗಾರಿ ಸ್ಥಗಿತಗೊಳಿಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನಂತರ ಪೊಲೀಸ್ ಇಲಾಖೆಯವರು ಮೈದಾನದ ಗೇಟ್‌ಗೆ ಹಾಕಿರುವ ಕೀಲಿಯನ್ನು ಎರಡು ದಿನಗಳಲ್ಲಿ ತೆಗೆಯಿಸಲಾಗುವುದು ಎಂದು ಹೇಳಿದರು.