ಬೆಳಗಾವಿ: ಕುಂದಾನಗರಿ ಬೆಳಗಾವಿ ಸ್ಮಾರ್ಟ್ಸಿಟಿಯಾಗಿ ಗುರುತಿಸಿಕೊಂಡು ಬೀಗತೊಡಗಿದ್ದರೆ ಇತ್ತ ನಾಗರಿಕರು ಕೆಲ ಮೂಲ ಸೌಕರ್ಯ ಇಲ್ಲದೆ ಕೊರಗುವಂತಾಗಿದೆ. ಸ್ಮಾರ್ಟ್ಸಿಟಿ ಯೋಜನೆಯಡಿ ಕೋಟ್ಯಂತರ ರೂ. ವ್ಯಯಿಸಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳಲಾಗಿದೆ. ಆದರೆ, ನಾಗರಿಕರಿಗೆ ಅಗತ್ಯವಾಗಿರುವ ಬೀದಿ ದೀಪಗಳ ಸೌಲಭ್ಯ ಸಮರ್ಪಕವಾಗಿಲ್ಲ ಸಿಗುತ್ತಿಲ್ಲ.
ಜಾಧವ ನಗರ, ಹನುಮಾನ ನಗರ, ಗಜಾನನ ಮಹಾರಾಜ ನಗರ, ಚೌಗಲೇ ವಾಡಿ, ಮಹಾಂತೇಶ ನಗರ, ರಾಮತೀರ್ಥ ನಗರ, ಪ್ರವಾಸಿ ಮಂದಿರ, ಶಿವಾಜಿ ನಗರ, ವಿಶ್ವೇಶ್ವರಯ್ಯ ನಗರ ಸೇರಿ ಹಲವಾರು ಕಡೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ನಾಗರಿಕರು ಪರದಾಡುವಂತಾಗಿದೆ. ಕತ್ತಲಲ್ಲೇ ಜನರು ಓಡಾಡುವಂತಾಗಿದೆ. ಇನ್ನು ಈಗಿರುವ ಬೀದಿ ದೀಪಗಳು ಸರಿಯಾಗಿ ಬೆಳಗುವುದಿಲ್ಲ.
ಮಳೆ ಬಂದು ಹೋದ ಮೇಲೆ ಸಾವಿರಾರು ಬೀದಿ ದೀಪಗಳು ಸ್ತಬ್ಧವಾಗುತ್ತವೆ. ಇವುಗಳ ದುರಸ್ತಿ ಕಾರ್ಯವೂ ತ್ವರಿತವಾಗಿ ಆಗುವುದಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ. ಮಹಾನಗರದ 58 ವಾರ್ಡ್ ವ್ಯಾಪ್ತಿಯಲ್ಲಿ 34,500 ಬೀದಿ ದೀಪಗಳಿವೆ. 8 ಪ್ಯಾಕೇಜ್ನಲ್ಲಿ ಅವುಗಳ ನಿರ್ವಹಣೆಗೆ ಮೂರು ಏಜೆನ್ಸಿಗೆ ವಹಿಸಲಾಗಿದೆ. 34,500 ಬೀದಿ ದೀಪಗಳ ಪೈಕಿ 20 ಸಾವಿರ ದೀಪಗಳು ಬೆಳಗುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆಗೆ ಕೋಟ್ಯಂತರ ರೂ. ಖರ್ಚು ಮಾಡಿದರೂ ಸಮರ್ಪಕವಾಗಿ ನಿರ್ವಹಣೆಯಾಗದಿರುವುದು ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಜನರಿಂದ 647 ದೂರು: ಬೀದಿ ದೀಪಗಳು ಬೆಳಗುತ್ತಿಲ್ಲ ಎಂದು ಆಗಸ್ಟ್ 1ರಿಂದ ಈವರೆಗೆ ನಗರದಲ್ಲಿ 647 ಕರೆಗಳು ಬಂದಿವೆ. ಪ್ರಮುಖವಾಗಿ ಸಹ್ಯಾದ್ರಿ ನಗರ, ಬಸವನ ಕುಡಚಿ, ಮರಾಠ ಕಾಲನಿ, ದೇವರಾಜ ಅರಸ್ ಕಾಲನಿ, ನಾನಾವಾಡಿ ಕಾಲನಿ, ಬಡಕಲ್ ಗಲ್ಲಿ, ಪೊಲೀಸ್ ಕ್ವಾರ್ರ್ಟಸ್, ವಡಗಾವಿ ಸೋನಾರ್ ಗಲ್ಲಿ, ಮಜಗಾಂವ ಪ್ರದೇಶಗಳ ನಿವಾಸಿಗಳು ಪಾಲಿಕೆಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಬೀದಿದೀಪ ನಿರ್ವಹಣೆ ಗುತ್ತಿಗೆದಾರರು ಸಮಸ್ಯೆ ನಿವಾರಿಸುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ತಿಂಗಳು ಕಳೆದರೂ ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ಎಂದು ದೂರುತ್ತಿದ್ದಾರೆ.
ಪ್ರಮುಖ ರಸ್ತೆಗಳಲ್ಲೇ ಕತ್ತಲು: ಬೆಳಗಾವಿ ಕೇಂದ್ರ ಬಸ್ ನಿಲ್ದಾಣ, ಕೋಟೆ ಕೆರೆ ರಸ್ತೆ, ಪ್ರವಾಸಿ ಮಂದಿರ, ಅಶೋಕ ವೃತ್ತ, ಆರ್ಟಿಒ ವೃತ್ತ, ಗಾಂಧಿ ನಗರ ರಸ್ತೆ, ಆಟೋನಗರ ರಸ್ತೆ, ಗೋವಾವೇಸ್ನಲ್ಲಿ ಬೆಳಕಿನ ವ್ಯವಸ್ಥೆ ಹಳಿ ತಪ್ಪಿದೆ. ವಿದ್ಯುತ್ ದೀಪಗಳು ಬೆಳಗುವುದು ದೂರುದ ಮಾತು. ಕೋಟೆ ಕೆರೆ ರಸ್ತೆ, ಅಶೋಕ ವೃತ್ತ, ಗಾಂಧಿ ನಗರ ರಸ್ತೆಗಳಲ್ಲಿ ನೂತನ ವಿದ್ಯುತ್ ದೀಪಗಳನ್ನು ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ತ್ವರಿತವಾಗಿ ಪೂರ್ಣಗೊಳಿಸಿಲ್ಲ. ಸ್ಮಾರ್ಟ್ಸಿಟಿ ಯೋಜನೆಯಡಿ ನಡೆಯುತ್ತಿರುವ ಒಳಚರಂಡಿ ಹಾಗೂ ರಸ್ತೆ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಇಲೆಕ್ಟ್ರಿಕಲ್ ಕೇಬಲ್ಗಳು ತುಂಡಾಗಿವೆ. ಪಾಲಿಕೆಯಿಂದ ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅದೂ ಸ್ಥಗಿತಗೊಂಡಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡ ಬಳಿಕವೇ ಆ ಮಾರ್ಗಗಳಲ್ಲಿ ಬೆಳಕಿನ ವ್ಯವಸ್ಥೆ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಷರತ್ತು ಆಟಕ್ಕುಂಟು ಲೆಕ್ಕಕ್ಕಿಲ್ಲ: ಬೀದಿ ದೀಪ ನಿರ್ವಹಣೆಯ ಗುತ್ತಿಗೆದಾರರಿಗೆ ವಿಧಿಸಿರುವ ಷರತ್ತುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ರ್ನಿಜನ ರಸ್ತೆಗಳಲ್ಲಿ ರಾತ್ರಿಹೊತ್ತು ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಅಪರಾಧ ಕೃತ್ಯಗಳೂ ಹೆಚ್ಚಾಗುತ್ತಿವೆ. ರಾತ್ರಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಹೊಯ್ಸಳ ವಾಹನದಲ್ಲಿ ಬರುವ ಸಿಬ್ಬಂದಿ ಆ ಬಳಿಕ ಎಲ್ಲಿಯೂ ಕಾಣ ಸಿಗುವುದಿಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಳಗಾವಿ ರೈಲ್ವೆ ಹಾಗೂ ವಿಮಾನಗಳ ಮೂಲಕ ಆಗಮಿಸುವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಪ್ರಮುಖ ರಸ್ತೆಗಳಲ್ಲಿ ಬೆಳಕಿನ ವೈವಸ್ಥೆ ಇಲ್ಲ. ಬಹುತೇಕ ರಸ್ತೆಗಳಲ್ಲಿ ಕೇವಲ ಕಂಬಗಳು ಮಾತ್ರ ಉಳಿದಿದ್ದು, ಅಲ್ಲಿ ದೀಪಗಳೇ ಇಲ್ಲ. ಅಲ್ಲೊಂದು ಇಲ್ಲೊಂದು ಎನ್ನುವಂತೆ ಬೀದಿ ದೀಪಗಳಿವೆ.
| ಜಗದೀಶ ಹೊಂಬಳಿ