ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಅನುಮಾನವಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲು ಜಿಲ್ಲಾ ಕಾಂಗ್ರೆಸ್ ಮುಂದಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಲ್ಲಿ ತಾಂತ್ರಿಕ ಪ್ರಮಾಣದಲ್ಲಿ ಸೂಚಿಸಿರುವಷ್ಟು ಸಿಮೆಂಟ್, ಕಬ್ಬಿಣ ಬಳಕೆ ಮಾಡುತ್ತಿಲ್ಲ. ಕ್ಯೂರಿಂಗ್ ಸಮರ್ಪಕವಾಗಿಲ್ಲ. ಗುತ್ತಿಗೆದಾರರು ಎಲ್ಲೋ ಕುಳಿತಿರುತ್ತಾರೆ. ಇಂಜಿನಿಯರ್‌ಗಳು, ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕಾದ ಅಧಿಕಾರಿಗಳು ಸ್ಥಳಕ್ಕೆ ತೆರಳುವುದಿಲ್ಲ.
ಪಾಲಿಕೆ ಆಯುಕ್ತರು ಕಚೇರಿಯಿಂದ ಹೊರಗೆ ಬರುವುದೇ ಇಲ್ಲ. ಎಲ್ಲವೂ ಪರ್ಸೆಂಟೇಜ್ ವ್ಯವಹಾರವಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಧಿಕಾರಿಗಳು ಗುತ್ತಿಗೆದಾರರಿಂದ ಕಮೀಷನ್ ಪಡೆದು, ಅವೈಜ್ಞಾನಿಕ ಕಾಮಗಾರಿಗೆ ಪರೋಕ್ಷ ಕಾರಣರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಮಾರ್ಟ್ ಸಿಟಿ ಅವ್ಯವಹಾರ ಹಾಗೂ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೆವು. ಆದರೆ ಕರೊನಾ ಕಾರಣದಿಂದ ಪ್ರತಿಭಟನೆಯನ್ನು ಕೈ ಬಿಟ್ಟಿದ್ದೇವೆ. ಯೋಜನೆ ಹೀಗೆಯೇ ಅವೈಜ್ಞಾನಿಕವಾಗಿ ಮುಂದುವರಿದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಾಲಿಕೆ ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಶಾಮೀರ್, ಪ್ರಮುಖರಾದ ರಾಮೇಗೌಡ, ಚಂದ್ರಭೂಪಾಲ, ರಂಗೇಗೌಡ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.