ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಇಲ್ಲಿಯ ಬಿ.ವಿ.ಬಿ. ಕಾಲೇಜು ಎದುರಿನ ಸ್ಮಶಾನದಲ್ಲಿ ಸಸಿ ನೆಟ್ಟು ಗಮನ ಸೆಳೆದಿದೆ.
ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ಮಶಾನ ಪರಿಸರದಲ್ಲಿ 30 ಬಿದಿರು, ಬಿಲ್ವಪತ್ರಿ ಸಸಿಗಳನ್ನು ನೆಟ್ಟರು.
ಸ್ಮಶಾನ ಪರಿಸರ ಹಸಿರಾಗಿಸಲು ಮೊದಲ ಹಂತದಲ್ಲಿ ಎರಡು ಬಗೆಯ ಸಸಿಗಳನ್ನು ನೆಡಲಾಗಿದೆ. ಬರುವ ದಿನಗಳಲ್ಲಿ ಸ್ಮಶಾನ ಆವರಣದ ಸುತ್ತಲೂ ಸಸಿಗಳನ್ನು ನೆಡಲಾಗುವುದು ಎಂದು ಕ್ಲಬ್ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.
ಸಸಿಗಳಿಗೆ ನೀರುಣಿಸಲು ಸ್ಮಶಾನದಲ್ಲಿ ಹಾಳಾಗಿದ್ದ ಕೊಳವೆಬಾವಿಯನ್ನು ನಗರಸಭೆ ಈಗಾಗಲೇ ದುರಸ್ತಿಪಡಿಸಿದೆ ಎಂದು ನಗರಸಭೆ ಸದಸ್ಯರೂ ಆದ ಅವರು ತಿಳಿಸಿದರು.
ಶವ ಸಂಸ್ಕಾರಕ್ಕೆ ಬರುವವರಿಗೆ ಸಕಲ ವ್ಯವಸ್ಥೆ ಕಲ್ಪಿಸುವ ದಿಸೆಯಲ್ಲಿ ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ ಮಠ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ವಿಜಯ ದಶಮಿ ನಂತರ ನಗರಸಭೆಯು ಸ್ಮಶಾನ ಪರಿಸರವನ್ನು ಸ್ವಚ್ಛಗೊಳಿಸಲಿದೆ. ಅಂತ್ಯ ಸಂಸ್ಕಾರಕ್ಕೆ ಬರುವವರಿಗೆ ನೆರಳಿಗಾಗಿ ಶೆಡ್ ನಿರ್ಮಾಣ, ಭದ್ರತಾ ಸಿಬ್ಬಂದಿ ವಾಸಕ್ಕೆ ಕೋಣೆ, ಸ್ಮಶಾನಕ್ಕೆ ಗೇಟ್ ಅಳವಡಿಕೆಗೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಖಜಾಂಚಿ ಸತೀಶ ಸ್ವಾಮಿ, ಸದಸ್ಯರಾದ ಭದ್ರಪ್ಪ ಮಿರಕಲ್, ಶಿವಕುಮಾರ ಪಾಟೀಲ, ವಿದ್ಯಾಸಾಗರ ಮೊದಲಾದವರು ಇದ್ದರು.