ಜಿಲ್ಲೆ

ಸ್ಮಶಾನದಲ್ಲಿ ದಲಿತರಿಗೆ ನಿವೇಶನ ಹಂಚಿಕೆಗೆ ವಿರೋಧ

ದಾವಣಗೆರೆ :ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ದಲಿತರಿಗೆ ಆಶ್ರಯ ಯೋಜನೆಯಡಿ ಮಂಜೂರಾಗಿದ್ದ ಜಮೀನಿನಲ್ಲೇ ನಿವೇಶನ ಹಂಚಿಕೆ ಮಾಡಬೇಕು. ಸ್ಥಳ ಬದಲಾವಣೆ ಮಾಡುವ ಪ್ರಯತ್ನ ನಡೆದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆಯ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಸಂತೇಬೆನ್ನೂರು ಹೋಬಳಿ ಅಧ್ಯಕ್ಷ ಹಿರೇಕೋಗಲೂರು ಕುಮಾರ್ ಹೇಳಿದರು.

ಹಿರೇಕೋಗಲೂರು ಗ್ರಾಮದಲ್ಲಿ ನಿವೇಶನ ಕೋರಿ 300 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮದ ಸರ್ವೆ ನಂ.46 ರಲ್ಲಿ ಎರಡು ಎಕರೆ ಹತ್ತು ಗುಂಟೆ ಜಮೀನು ನೀಡಲು ಪಂಚಾಯ್ತಿಯಲ್ಲಿ ಮಂಜೂರಾತಿಯಾಗಿ, ನಿವೇಶನ ಹಂಚಿಕೆ ಪ್ರಯತ್ನ ನಡೆಯಬೇಕಿತ್ತು. ಮೇಲ್ವರ್ಗ ಜನರ ಒತ್ತಡಕ್ಕೆ ಮಣಿದ ಶಾಸಕ ಬಸವರಾಜ್ ಶಿವಗಂಗಾ ಅವರು ಸರ್ವೆ ನಂಬರ್ 81ರಲ್ಲಿ ಬದಲಿ ಜಾಗ ಕಲ್ಪಿಸಿಕೊಡುವುದಾಗಿ ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಜೂರಾಗಿರುವ ಜಮೀನು ಕಂದಗಲ್- ಹಿರೇಕೋಗಲೂರು ಮುಖ್ಯ ರಸ್ತೆಯಲ್ಲಿದೆ. ಇದು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ಆದರೆ ಇದರ ಬದಲಾಗಿ ಸರ್ವೆ ನಂಬರ್ 81ರಲ್ಲಿನ ಸ್ಮಶಾನ ಜಾಗವನ್ನು ನೀಡುವ ಹುನ್ನಾರ ನಡೆಸಲಾಗುತ್ತಿದೆ.

ಇಲ್ಲಿನ 18 ಎಕರೆ ಜಾಗದಲ್ಲಿ 12.5 ಎಕರೆ ಸ್ಮಶಾನ ಆವರಿಸಿದೆ. ಅದರ ಸುತ್ತಲಿನ ತಗ್ಗು ಪ್ರದೇಶದ ಹಾಗೂ ವಾಸಕ್ಕೆ ಯೋಗ್ಯವಲ್ಲದ ಜಮೀನು ಇದಾಗಿದೆ. ಈ ಜಾಗ ಗ್ರಾಮದಿಂದ 2 ಕಿಮೀ ದೂರದಲ್ಲಿದೆ. ಸುಮಾರು ಒಂದೂವರೆ ಕಿ.ಮೀ.ವರೆಗೆ ನಾಲಾ ಕಾಲುವೆ ಮೇಲೆ ಬರಬೇಕಿದೆ. ಇಂತಹ ಜಾಗವನ್ನು ದಲಿತರಿಗೆ ನೀಡುವುದು ಸರಿಯಲ್ಲ ಎಂದರು.

ಸರ್ವೆ ನಂ.76ರಲ್ಲಿ 14 ಎಕರೆ, ಸರ್ವೆ ನಂ. 77ರಲ್ಲಿ 38 ಎಕರೆ, ಸರ್ವೆ ನಂ. 78ರಲ್ಲಿ 33 ಎಕರೆ ಜಮೀನು ಖಾಲಿ ಇದ್ದರೂ ದಲಿತರಿಗೆ ನೀಡಲು ಸ್ಮಶಾನ ಭೂಮಿಯೇ ಕಣ್ಣಿಗೆ ಬಿತ್ತೆ ಎಂದು ಪ್ರಶ್ನಿಸಿದ ಕುಮಾರ್, ಈಗಾಗಲೆ ನಿಗದಿಯಾದ ಜಮೀನಿನ ಜತೆಯಲ್ಲೇ, ಅದೇ ಸರ್ವೇ ನಂಬರ್‌ನಲ್ಲಿ ಉಳಿದ ಹೆಚ್ಚುವರಿ ಜಮೀನು ಪಡೆದು ದಲಿತರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜಪ್ಪ ನೀತಿಗೆರೆ, ನಾಗರಾಜ್, ಕೆ.ಪಿ.ಪ್ರವೀಣ್, ರತ್ನಮ್ಮ, ಹಸೀನಾ, ಪುಟ್ಟಮ್ಮ, ಸುನೀಲ್, ರೇವಣಪ್ಪ ಇತರರು ಇದ್ದರು.